ತುಮಕೂರಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ: ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಆಂಜಿನಪ್ಪ

Update: 2019-08-28 13:36 GMT

ತುಮಕೂರು,ಆ.28: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದ್ದರೂ, ಕಳೆದ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಣ್ಣ ವ್ಯತ್ಯಾಸದಿಂದ ಪಕ್ಷಕ್ಕೆ ಸೋಲುಂಟಾಯಿತು. ಜೆಡಿಎಸ್ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಬೂತ್ ಮಟ್ಟದವರೆಗೆ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡುವುದಾಗಿ ಹೇಳಿದರು.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಜಿಲ್ಲೆಯ ಎಲ್ಲ ಸಮಿತಿಗಳನ್ನು ಪುನರಚನೆಯನ್ನು ಮಾಡುವುದರೊಂದಿಗೆ ಪಕ್ಷದ ವರಿಷ್ಟರು ನಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಸಿ.ಚೆನ್ನಿಗಪ್ಪ ಅವರೊಂದಿಗೆ ಕಾರ್ಯಾಧ್ಯಕ್ಷನಾಗಿ ಪಕ್ಷವನ್ನು ಸಂಘಟಿಸಿದ್ದೆ, ಅವರು ಅನಾರೋಗ್ಯಕ್ಕೀಡಾಗಿರುವುದರಿಂದ ಪಕ್ಷದ ವರಿಷ್ಠರು ಅಧ್ಯಕ್ಷನಾಗುವ ಅವಕಾಶವನ್ನು ನೀಡಿದ್ದು, ಶೀಘ್ರವೇ ಆಸ್ಪತ್ರೆಗೆ ತೆರಳಿ ಚೆನ್ನಿಗಪ್ಪ ಅವರ ಆರ್ಶೀವಾದವನ್ನು ಪಡೆಯುವುದಾಗಿ ಹೇಳಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಸಮರ್ಥವಾಗಿ ಕಟ್ಟುವ ನಿಟ್ಟಿನಲ್ಲಿ ಎಲ್ಲ ಮುಖಂಡರು ಹೊಸ ಅಧ್ಯಕ್ಷರಿಗೆ ಅಗತ್ಯ ಸಹಕಾರವನ್ನು ನೀಡಬೇಕಾಗಿದೆ. ಜೆಡಿಎಸ್ ಉಳಿಯಬೇಕಾದರೆ ಪಕ್ಷವನ್ನು ಬಲಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಹೊಸ ತಂಡ ಕಾರ್ಯನಿರ್ವಹಿಸಲಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇದೆ. ದೇಶದಲ್ಲಿ ರೈತ ರಿಗೆ 2 ಲಕ್ಷ ಸಾಲಮನ್ನಾ ಮಾಡಿರುವುದು ಕುಮಾರಸ್ವಾಮಿ ಮಾತ್ರ. ಇದನ್ನು ಮನಗಂಡು ಪಕ್ಷವನ್ನು ಬಲಪಡಿಸಬೇಕಿದೆ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಜಿಲ್ಲೆಯ ಮುಖಂಡರ ಆಶಯದಂತೆ ವರಿಷ್ಟರು ಜಿಲ್ಲಾ ಸಮಿತಿಯನ್ನು ಪುನರಚನೆ ಮಾಡಿದ್ದು, ಸಕ್ರಿಯ ಜಿಲ್ಲಾ ಕಮಿಟಿಯನ್ನು ರಚಿಸುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸತ್ಯನಾರಾಯಣ್, ಮಾಜಿ ಶಾಸಕ ಪಿ.ಸುಧಾಕರ್‍ಲಾಲ್, ಪ್ರಧಾನ ಕಾರ್ಯದರ್ಶಿಗಳಾದ ಮಹಾಲಿಂಗಪ್ಪ, ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ದೇವರಾಜು, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಹೆಚ್.ಎಲ್.ಶಿವಕುಮಾರ್, ಬೆಳ್ಳಿ ಲೋಕೇಶ್ ರೆಡ್ಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೀಲಾವತಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News