ಶಶಿ ತರೂರ್, ಜೈರಾಂ ರಮೇಶ್ ವಿರುದ್ಧ ವೀರಪ್ಪ ಮೊಯ್ಲಿ ವಾಗ್ದಾಳಿ: ಶಿಸ್ತು ಕ್ರಮಕ್ಕೆ ಆಗ್ರಹ

Update: 2019-08-28 15:53 GMT

ಬೆಂಗಳೂರು, ಆ.28: ಯುಪಿಎ- 2 ಸರಕಾರದ ನೀತಿ ಮತ್ತು ಯೋಜನೆಗಳು ಅಸ್ತವ್ಯಸ್ತ ಆಗಲು ಮತ್ತು ಹಲವಾರು ಬಾರಿ ಪಕ್ಷವು ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಲು ಜೈರಾಂ ರಮೇಶ್ ಕಾರಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಜೊತೆಗೆ ಶಶಿ ತರೂರ್ ಅವರನ್ನೂ ತರಾಟೆಗೆತ್ತಿಕೊಂಡಿರುವ ಮೊಯ್ಲಿ, ಪ್ರಧಾನಿ ಮೋದಿಯನ್ನು ಶ್ಲಾಘಿಸುವ ಮೂಲಕ ವಿಪಕ್ಷಗಳು ಪ್ರಧಾನಿ ವಿರುದ್ಧ ಮಾಡುತ್ತಿರುವ ಟೀಕೆಯ ವಿಶ್ವಾಸಾರ್ಹತೆಯನ್ನು ತರೂರ್ ಕುಂದಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಇಬ್ಬರು ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮೊಯ್ಲಿ ಆಗ್ರಹಿಸಿದ್ದಾರೆ.

ಸದಾ ಕಾಲ ಮೋದಿಯನ್ನು ಟೀಕಿಸುತ್ತಾ ಬಂದರೆ ಕಾಂಗ್ರೆಸ್‌ಗೆ ಅದರಿಂದ ಏನೂ ಪ್ರಯೋಜನವಾಗದು ಎಂದು ಜೈರಾಂ ರಮೇಶ್ ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಮೊಯ್ಲಿ, ಇದು ಕೆಟ್ಟ ಅಭಿರುಚಿಯ ಹೇಳಿಕೆಯಾಗಿದ್ದು, ಅವರು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಈ ರೀತಿಯ ಹೇಳಿಕೆ ನೀಡುವ ಯಾವ ಮುಖಂಡರೂ ಕಾಂಗ್ರೆಸ್ ಪಕ್ಷ ಅಥವಾ ಅದರ ನಾಯಕತ್ವಕ್ಕೆ ಸೇವೆ ಸಲ್ಲಿಸುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ . ಯಾಕೆಂದರೆ ಸಚಿವರಾಗಿ ಪ್ರತಿನಿಧಿಸಿದ್ದವರು ವಿಪಕ್ಷದಲ್ಲಿ ಕುಳಿತುಕೊಳ್ಳುವಾಗ ಆಡಳಿತ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಮೊಯ್ಲಿ ಹೇಳಿದರು.

ಶಶಿ ತರೂರ್ ಓರ್ವ ಪ್ರಬುದ್ಧ ರಾಜಕಾರಣಿ ಎಂದು ಯಾವತ್ತೂ ಪರಿಗಣಿಸಿಲ್ಲ. ಆಗಿಂದಾಗ್ಗೆ ಪ್ರಚಾರದಲ್ಲಿ ಇರಲು ಏನಾದರೊಂದು ಹೇಳುತ್ತಿರುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ. ಅವರೊಬ್ಬ ಪ್ರಬುದ್ಧ ರಾಜಕಾರಣಿಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ಇಂತಹ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇದು ಸಕಾಲ. ಪಕ್ಷದೊಳಗೆ ಇದ್ದುಕೊಂಡು ಪಕ್ಷಕ್ಕೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಹಾನಿ ಎಸಗುವ ಬದಲು ಅಂತವರು ಪಕ್ಷ ಬಿಟ್ಟು ಹೋಗಲಿ ಎಂದು ಮೊಯ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News