ಅರುಣ್‌ ಜೇಟ್ಲಿ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ: ಸಚಿವ ಸುರೇಶ್‌ ಕುಮಾರ್

Update: 2019-08-28 16:25 GMT

ಬೆಂಗಳೂರು, ಆ.28: ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿತ್ತು. ಅವರ ಅಗಲಿಕೆಯಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿಯ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಎಲ್ಲ ಪ್ರದೇಶಗಳಲ್ಲೂ ಬಿಜೆಪಿಯನ್ನು ಕಟ್ಟಿಬೆಳೆಸುವಲ್ಲಿ ಅರುಣ್‌ಜೆಟ್ಲಿ ಕೊಡುಗೆ ಅವಿಸ್ಮರಣೀಯವೆಂದು ಸ್ಮರಿಸಿದರು.

ಅರುಣ್ ಜೇಟ್ಲಿ ಹಿರಿಯ ವಕೀಲರಾಗಿ, ಉತ್ತಮ ಸಂಸದೀಯಪಟುವಾಗಿ ವಿರೋಧ ಪಕ್ಷದ ನಾಯಕರು ಮೆಚ್ಚಿಕೊಳ್ಳುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ಯಾರನ್ನೂ ವೈಯಕ್ತಿವಾಗಿ ಟೀಕಿಸಿದವರಲ್ಲ. ಹೀಗಾಗಿ ಅವರನ್ನು ಅಜಾತಶತ್ರುವೆಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.

2008-2014ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು, ರಾಜ್ಯದ ಪ್ರತಿ ಸಮಸ್ಯೆಯನ್ನು ಗಂಭೀರವಾಗಿ ವಿಶ್ಲೇಷಿಸಿ, ನಮಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಚುನಾವಣೆಯಲ್ಲಿ ತಂತ್ರಗಾರಿಕೆಯನ್ನು ಹೆಣೆಯುವುದರಲ್ಲಿ ಅವರನ್ನು ಹೊರತುಪಡಿಸಿ ಮತ್ತೊಬ್ಬರು ಸಿಗಲಾರರು ಎನ್ನುವ ಮಟ್ಟಕ್ಕೆ ನಮ್ಮನ್ನು ಪ್ರಭಾವಿಸುತ್ತಿದ್ದರು ಎಂದು ಅವರು ಸ್ಮರಿಸಿದರು.

ಅರುಣ್ ಜೇಟ್ಲಿಗೆ ಬಿಜೆಪಿಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರುವಂತಹ ಎಲ್ಲ ಅವಕಾಶಗಳು ಇದ್ದವು. ಆದರೆ, ಅವರು ಅಧಿಕಾರಕ್ಕೆ ಎಂದೂ ಆಸೆ ಪಟ್ಟವರಲ್ಲ. ಹೀಗಾಗಿ 2013ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ಗೆ ಸೀಮಿತವಾಗಿದ್ದ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ, ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಿದರು ಎಂದು ಅವರು ನೆನೆದರು.

ಸಾಮಾಜಿಕ ಕಾರ್ಯಕರ್ತ ಎಂ.ಪಿ.ಕುಮಾರ್ ಮಾತನಾಡಿ, ಬಿಜೆಪಿ ಹಿರಿಯ ನಾಯಕ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು. ತನ್ನ ಬುದ್ದಿವಂತಿಕೆ, ಚಾಣಾಕ್ಷತೆಯಿಂದಲೇ ದೇಶದಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಿದ್ದರು. ಅವರ ಅಗಲಿಕೆ ನನ್ನಂತ ಲಕ್ಷಾಂತರ ಜನರಿಗೆ ತೀವ್ರ ನೋವುಂಟು ಮಾಡಿದೆ ಎಂದು ಸ್ಮರಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್‌ನ ಹಿರಿಯ ನಾಯಕ ಪಿಜಿಆರ್ ಸಿಂದ್ಯಾ, ಶೈಲೇಶ್ ಚಂದ್ರಗುಪ್ತಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News