ಬಿಜೆಪಿ ಓಲೈಕೆಯೇ ಎಸ್.ಎಲ್.ಭೈರಪ್ಪರ ಕಾಯಕ: ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಪುಟ್ಟಸಿದ್ದಶೆಟ್ಟಿ

Update: 2019-08-28 16:52 GMT

ಮೈಸೂರು,ಆ.28: ಸಾಹಿತಿ ಎಸ್.ಎಲ್.ಭೈರಪ್ಪ ಅವರು ಧಾರವಾಡದಲ್ಲಿ ಪತ್ರಿಕೆಗಳೊಡನೆ ಮಾತನಾಡುವಾಗ ಮುಸ್ಲಿಮರ ಓಲೈಕೆಯೇ ಕಾಂಗ್ರೆಸ್ ಕಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರಗತಿಪರ ಚಿಂತಕರಿಗೆ ಆಘಾತ ಉಂಟು ಮಾಡಿದೆ. ಬಿಜೆಪಿ ಓಲೈಕೆಯೇ ಎಸ್.ಎಲ್.ಭೈರಪ್ಪ ಅವರ ಕಾಯಕ ಎಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ಧಶೆಟ್ಟಿ ತಿರುಗೇಟು ನೀಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಓಲೈಕೆಯೇ ಭೈರಪ್ಪ ಅವರ ಕಾಯಕವಾಗಿದ್ದು, ಅವರು ಸಾಹಿತಿಯಂತೆ ಮಾತನಾಡದೇ ಬಿಜೆಪಿ ವಕ್ತಾರರಂತೆ ಮಾತನಾಡುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಜೊತೆಗೆ, ಒಮ್ಮೆ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶ ವಿಭಜನೆ ವೇಳೆ ಪಾಕಿಸ್ತಾನದಲ್ಲಿರುವ ಹಿಂದುಗಳನ್ನು ಇಲ್ಲಿಗೆ, ಇಲ್ಲಿನ ಮುಸ್ಲಿಮರನ್ನು ಅಲ್ಲಿಗೆ ಕಳುಹಿಸಬೇಕೆಂದು ನೀಡಿದ್ದ ಸಲಹೆಯನ್ನು ನೆಹರುರವರು ಒಪ್ಪಲಿಲ್ಲ ಎಂದು ಸಹಾ ಭೈರಪ್ಪ ಹೇಳಿದ್ದಾರೆ. ಆದರೆ ಅಂಬೇಡ್ಕರ್ ಅವರು ಆ ರೀತಿ ಎಲ್ಲಿ ಹೇಳಿದ್ದರೆಂಬ ಬಗ್ಗೆ ದಾಖಲೆಗಳನ್ನು ಭೈರಪ್ಪ ಪ್ರದರ್ಶಿಸಲು ಸಾಧ್ಯವೇ ಎಂದು ಸವಾಲೆಸೆದರು.

ಭೈರಪ್ಪ ಅವರು ಒಬ್ಬ ಸಾಹಿತಿ ಮಾತ್ರ ಆಗಿದ್ದು, ಹೀಗಿರುವಾಗ ನೆಹರು ಅವರನ್ನು ಟೀಕಿಸುವ ರಾಜಕೀಯ ಮುತ್ಸದ್ಧಿತನ ಇದೆಯೇ ಎಂದು ಪ್ರಶ್ನಿಸಿದರು. ಭೈರಪ್ಪ ಅವರು ಕೋಮುವಾದಿ ಸಿದ್ಧಾಂತ, ಕೋಮುವಾದಿ ಭಾವನೆ ಕೆರಳಿಸುವ ರೀತಿ ಮಾತನಾಡುತ್ತಿದ್ದು, ಮೂಲಭೂತವಾದಿಗಳಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಾಕೀತು ಮಾಡಿದರು.

ಒಂದು ನಿರ್ದಿಷ್ಟ ಧರ್ಮವನ್ನು ಹೆಸರಿಸಿ ಅವಹೇಳನಕಾರಿಯಾಗಿ ಮಾತನಾಡುವುದು ಅಪರಾಧ ಆಗಿದ್ದು, ಆ ರೀತಿಯ ಹೇಳಿಕೆ ಭೈರಪ್ಪ ಅವರಿಗೆ ಶೋಭೆ ತರುವುದಿಲ್ಲ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬೋರಪ್ಪ ಶೆಟ್ಟಿ, ಟಿ.ಕೆ. ಹೊನ್ನಪ್ಪ ತೊಂಡಾಳು, ಬಿ.ಎಸ್. ಸಂಪತ್ ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News