ಅದ್ದೂರಿ ಪೂಜೆ ನೆರವೇರಿಸಿ ಸಾರ್ವಜನಿಕರ ಟೀಕೆಗೆ ಗುರಿಯಾದ ಡಿಸಿಎಂ ಸವದಿ, ಶಶಿಕಲಾ ಜೊಲ್ಲೆ

Update: 2019-08-28 17:32 GMT

ಬೆಂಗಳೂರು, ಆ. 28: ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದು ನೆರವಿಗಾಗಿ ಹಂಬಲಿಸುತ್ತಿರುವುದರ ಮಧ್ಯೆ ನೂತನ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ವಿಧಾನಸೌಧದಲ್ಲಿ ತಮ್ಮ ಕೊಠಡಿ ಪ್ರವೇಶಕ್ಕೆ ಅದ್ದೂರಿ ಪೂಜೆ ನೆರವೇರಿಸಿ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನೀಡಲಾಗಿರುವ ವಿಧಾನಸೌಧದ ಮೂರನೆ ಮಹಡಿಯಲ್ಲಿನ 301 ಮತ್ತು 301 ‘ಎ’ ಸಂಖ್ಯೆಯ ಕೊಠಡಿಯನ್ನು ಸಂಪೂರ್ಣ ತಳಿರು-ತೋರಣ, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಅದೇ ರೀತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನೀಡಲಾಗಿರುವ ವಿಕಾಸಸೌಧದ 141 ಕೊಠಡಿಯನ್ನು ಅಲಂಕರಿಸಲಾಗಿತ್ತು.

ಬೆಳಗಾವಿ ಜಿಲ್ಲೆ ಪ್ರತಿನಿಧಿಸುತ್ತಿರುವ ಉಭಯ ಸಚಿವರು ಜಿಲ್ಲೆಯ ಜನತೆ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆಮಠ ಕಳೆದುಕೊಂಡು ಅನ್ನ, ನೀರಿಲ್ಲದೆ ಪರಿಹಾರ ಶಿಬಿರಗಳಲ್ಲಿ ಬದುಕು ದೂಡುತ್ತಿದ್ದರೆ ಇತ್ತ, ಅದೇ ಜಿಲ್ಲೆಯ ಸಚಿವರು ಜನತೆಗೆ ಸ್ಪಂದಿಸುವುದನ್ನು ಬಿಟ್ಟು ಕೊಠಡಿ ಪ್ರವೇಶಕ್ಕೆ ಅದ್ದೂರಿ ಪೂಜೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನೆ ಕೇಳಿಬಂದಿದೆ.

ಇದಕ್ಕೆ ಅಪವಾದವೆಂಬಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮಗೆ ನೀಡಲಾಗಿರುವ ವಿಧಾನಸೌಧದ ಕೊಠಡಿ ಸಂಖ್ಯೆ 336ರಲ್ಲಿ ಅತ್ಯಂತ ಸರಳ ರೀತಿಯಲ್ಲಿ ಪೂಜೆ ನೆರವೇರಿಸಿ, ಕೊಠಡಿ ಪ್ರವೇಶಿಸಿ ಇಲಾಖೆಯ ಕಾರ್ಯ ಚಟುವಟಿಕೆ ಆರಂಭಿಸಿದ್ದಾರೆ.

ಅದ್ದೂರಿ ಏನಿಲ್ಲ: ‘ಕೊಠಡಿ ಪ್ರವೇಶದ ಪೂಜೆ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಆಗಮಿಸಿದ್ದರು, ಹೀಗಾಗಿ ಅವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಅದ್ದೂರಿಯ ಅರ್ಥವೇನು? ಹೂವು, ಹಣ್ಣು-ಕಾಯಿ ತಂದು ಪೂಜೆ ನೆರವೇರಿಸಿದ್ದೇವೆ, ಅಷ್ಟೇ’ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News