ಮುಖ್ಯಮಂತ್ರಿಯಿಂದ ಕಾಟಾಚಾರದ ಅತಿವೃಷ್ಟಿ ಸಮೀಕ್ಷೆ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್

Update: 2019-08-28 18:17 GMT

ಚಿಕ್ಕಮಗಳೂರು, ಆ.28: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯ ಪರಿಶೀಲನೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಮಲೆಮನೆ ಗ್ರಾಮದಲ್ಲಿ ಕೇವಲ 18 ನಿಮಿಷಗಳ ಕಾಲ ಇದ್ದು, ತರಾತುರಿಯಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಸಂತ್ರಸ್ತರ ಅಳಲು ಕೇಳಿಲ್ಲ. ಗಂಜಿಕೇಂದ್ರಕ್ಕೂ ಭೇಟಿ ನೀಡಿಲ್ಲ. ಪರಿಹಾರ ಕ್ರಮಗಳ ಭರವಸೆಯನ್ನೂ ನೀಡಿಲ್ಲ. ಸಿಎಂ ಯಡಿಯೂರಪ್ಪ್ದವರ ಈ ಭೇಟಿ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿದ್ದು, ಅತಿವೃಷ್ಟಿ ಪ್ರದೇಶಗಳಿಗೆ ಸಿಎಂ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಳೆಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಟಚಾರಕ್ಕೆ ಭೇಟಿನೀಡಿ ಮರಳಿದ್ದು, ನಿರಾಶ್ರಿತರಲ್ಲಿ ನಿರಾಸೆ ಉಂಟು ಮಾಡಿದೆ. ಇದನ್ನು ಜಿಲ್ಲಾ ಜೆಡಿಎಸ್ ಖಂಡಿಸುತ್ತದೆ ಎಂದ ಅವರು, ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಸಂತ್ರಸ್ತರು ಮನೆಮಠ, ಜಮೀನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇವಲ 18 ನಿಮಿಷಗಳ ಕಾಲ ಸ್ಥಳ ಪರಿಶೀಲನೆ ಮಾಡಿ ನಿರಾಶ್ರಿತರ ಸಮಸ್ಯೆಗಳನ್ನು ಸರಿಯಾಗಿ ಆಲಿಸದೇ ಯಾವುದೇ ಪರಿಹಾರ ಘೋಷಿಸದೇ ಹಿಂದಿರುಗಿದ್ದಾರೆ. ಸದಾ ನಾವು ರೈತ ಪರ ಎನ್ನುವ ಬಿಜೆಪಿಯವರಿಗೆ ನಿಜವಾಗಿಯೂ ರೈತರು, ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಸಿಎಂ ಅವರ ಈ ಭೇಟಿಯಿಂದ ಸಾಬೀತಾಗಿದೆ ಎಂದ  ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಕೇಂದ್ರ ಅತೀವೃಷ್ಟಿ ಅಧ್ಯಯನ ತಂಡ ಚಿಕ್ಕಮಗಳೂರು ಜಿಲ್ಲೆಗೆ ಇದುವರೆಗೂ ಭೇಟಿ ನೀಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿಯ ನಾಲ್ವರು ಶಾಸಕರು, ಓರ್ವ ಸಂಸದೆ ಇದ್ದು, ಅವರ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

ಜಿಲ್ಲೆಯ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಂತ್ರಸ್ತರ ನೆರವಿಗೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದ್ದಾರೆ. ಸರಕಾರ ಮಾಡಬೇಕಾದ ಕೆಲಸವನ್ನು ದಾನಿಗಳು ಮಾಡಿದ್ದಾರೆ. ಆದರೆ ದಾನಿಗಳು ನೀಡಿದ ವಸ್ತುಗಳನ್ನು ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲೆಯ ಬಿಜೆಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಮಳೆಹಾನಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕನಿಷ್ಟ ಕಾಳಜಿಯನ್ನು ತೋರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೆ ಎಷ್ಟರ ಮಟ್ಟಿಗೆ ರೈತರು, ಸಂತ್ರಸ್ತರ ಪರ ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ದೇವರಾಜ್ ವ್ಯಂಗ್ಯವಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ನೆರೆ ಸಂತ್ರಸ್ತರ ನೆರವಿಗೆ ಬರಬೇಕು. ಮನೆಮಠ, ಜಮೀನು ಕಳೆದುಕೊಂಡಿರುವ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು. ಬ್ಯಾಂಕುಗಳಲ್ಲಿರುವ ನಿರಾಶ್ರಿತರ ಸಾಲಮನ್ನಾ ಮಾಡಬೇಕು ಹಾಗೂ ನಿರಾಶ್ರಿತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ  ಬ್ಯಾಂಕುಗಳಲ್ಲಿ  ಸಾಲ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕೆಂದು ಇದೇ ವೇಳೆ ದೇವರಾಜ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಪ್ಪ,  ಲಕ್ಷ್ಮಣ್, ಜಯರಾಜ ಅರಸ್, ಹೊಲದಗದ್ದೆ ಗಿರೀಶ್ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಭೇಟಿಗೆ ಹೆಲಿಕಾಪ್ಟರ್ ಮೂಲಕ ಬಂದಿದ್ದಾರೆ. ಅವರೊಂದಿಗೆ ನೂರಾರು ಪೊಲೀಸರ ವಾಹನಗಳಲ್ಲಿ ತಿರುಗಾಡಿದ್ದಾರೆ. ವ್ಯಾಪಕ ಬಂದೋಬಸ್ತ್ ಬದಗಿಸಿದ್ದಾರೆ. ಕೇವಲ 18 ನಿಮಿಷಗಳ ಭೇಟಿಗೆ ಇಷ್ಟೆಲ್ಲಾ ವ್ಯವಸ್ಥೆ ಅಗತ್ಯವಿರಲಿಲ್ಲ. ಇದಕ್ಕಾಗಿ ಕೋಟಿಗಟ್ಟಲೆ ಸಾರ್ವಜನಿಕರ ತೆರಿಗೆ ಹಣ ವ್ಯವಯಿಸಲಾಗಿದೆ. ಸಿಎಂ ಭೇಟಿಯಿಂದ ಸಂತ್ರಸ್ತರಿಗೆ ನಯಾಪೈಸೆಯ ಪ್ರಯೋಜನವಾಗಿಲ್ಲ. ಸಿಎಂ ಇಂತಹ ಕಾಟಾಚಾರದ ಭೇಟಿ ಯಾವ ಪುರುಷಾರ್ಥಕ್ಕಾಗಿ ಮಾಡಿದ್ದಾರೆಂಬುದನ್ನು ಬಿಜೆಪಿ ಮುಖಂಡರು ಸ್ಪಷ್ಟಪಡಿಸಬೇಕು.
- ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News