ಮಗು ಅಪಹರಣ ವದಂತಿ: ಪೊಲೀಸರು, ಆರೋಗ್ಯಾಧಿಕಾರಿಗಳ ಮೇಲೆ ಗುಂಪು ದಾಳಿ

Update: 2019-08-29 14:36 GMT

ಫತೇಪುರ,ಆ.29: ಮಕ್ಕಳ ಅಪಹರಣಕಾರರು ಎಂಬ ವದಂತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಖೇಸನ್ ಗ್ರಾಮದಲ್ಲಿ ಬುಧವಾರ ಸುಮಾರು 150ರಷ್ಟಿದ್ದ ಸ್ಥಳೀಯರ ಗುಂಪೊಂದು ಗ್ರಾಮಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು,ಅವರ ರಕ್ಷಣೆಗೆ ಧಾವಿಸಿದ್ದ ಪೊಲೀಸರ ಮೇಲೂ ದಾಳಿ ನಡೆಸಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ.

ಘಟನೆಯ ಬಳಿಕ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು,15 ಜನರನ್ನು ಬಂಧಿಸಲಾಗಿದೆ ಎಂದು ಫತೇಪುರ ಎಸ್‌ಪಿ ರಮೇಶ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಕ್ಕಳ ಅಪಹರಣಕಾರರು ಎಂದು ವದಂತಿಗಳನ್ನು ಹಬ್ಬಿಸಲಾಗಿತ್ತು ಎಂದು ಹಸ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ.ಅಜಯ ಗೌತಮ ಹೇಳಿದರು.

ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ ಮತ್ತು ಪರಿಸ್ಥಿತಿಯು ಸಹಜವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

 ಮಂಗಳವಾರವಷ್ಟೇ ತಮ್ಮ ಸೋದರಳಿಯನನ್ನು ವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದ ಸೋದರರಿಬ್ಬರನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿದ್ದ ಗುಂಪೊಂದು ಅವರನ್ನು ಥಳಿಸಿದ್ದ ಘಟನೆ ರಾಜ್ಯದ ಸಂಭಲ್ ಜಿಲ್ಲೆಯಲ್ಲಿ ನಡೆದಿತ್ತು. ಈ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದರೆ,ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

 ಕಳೆದ ಕೆಲವು ದಿನಗಳಲ್ಲಿ ಮಕ್ಕಳ ಅಪಹರಣಕಾರರು ಎಂದು ಶಂಕಿಸಿ ಗುಂಪು ದಾಳಿ ನಡೆದ 46 ಘಟನೆಗಳು ವರದಿಯಾಗಿದ್ದು,90 ಜನರನ್ನು ಬಂಧಿಸಲಾಗಿದೆ. ಓರ್ವ ವ್ಯಕ್ತಿ ಕೊಲ್ಲಲ್ಪಟ್ಟಿದ್ದು,29 ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಪ್ರಕರಣಗಳು ಬರೇಲಿ,ಮೀರತ್ ಮತ್ತು ಆಗ್ರಾಗಳಲ್ಲಿ ನಡೆದಿವೆ ಎಂದು ಉತ್ತರ ಪ್ರದೇಶದ ಡಿಜಿಪಿ ಓ.ಪಿ.ಸಿಂಗ್ ಅವರು ಬುಧವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News