ಕ್ರೀಡಾ ಪ್ರಶಸ್ತಿ ಪ್ರದಾನ

Update: 2019-08-29 18:25 GMT
ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಗುರುವಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದ ಭಾರತದ ಮೊದಲ ಮಹಿಳಾ ಪ್ಯಾರಾ-ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು. ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಕುಸ್ತಿಪಟು ಬಜರಂಗ್ ಪೂನಿಯಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನಿಸಿದರು. ಸಾಯಿ ಪ್ರಣೀತ್(ಬ್ಯಾಡ್ಮಿಂಟನ್), ಪೂನಂ ಯಾದವ್(ಕ್ರಿಕೆಟ್),ಸ್ವಪ್ನಾ ಬರ್ಮನ್(ಅಥ್ಲೆಟಿಕ್ಸ್), ಗುರುಪ್ರೀತ್ ಸಿಂಗ್ ಸಂಧು(ಫುಟ್ಬಾಲ್), ಸೋನಿಯಾ ಲಾಥೆರ್(ಬಾಕ್ಸರ್), ಗೌರವ್ ಗಿಲ್(ಮೋಟಾರ್‌ಸ್ಪೋರ್ಟ್ಸ್) ಹಾಗೂ ಅಜಯ್ ಠಾಕೂರ್(ಕಬಡ್ಡಿ)ಸಹಿತ 19 ಕ್ರೀಡಾಪಟುಗಳು ರಾಷ್ಟ್ರಪತಿ ಕೋವಿಂದ್‌ರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಕ್ರಿಕೆಟಿಗ ರವೀಂದ್ರ ಜಡೇಜ, ಶಾಟ್‌ಪುಟ್‌ಪಟು ತೇಜಿಂದರ್ ಪಾಲ್ ಸಿಂಗ್, ಓಟಗಾರ ಮುಹಮ್ಮದ್ ಅನಸ್ ಈ ವರ್ಷದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರೆಲ್ಲರೂ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಖೇಲ್‌ರತ್ನ ಪ್ರಶಸ್ತಿ 7.5 ಲಕ್ಷ ರೂ. ನಗದು ಬಹುಮಾನ, ಅರ್ಜುನ ಪ್ರಶಸ್ತಿಯು ತಲಾ 5 ಲಕ್ಷ ರೂ.ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ರಾಷ್ಟ್ರಪತಿ ಕೋವಿಂದ್ ಅವರು ಸಂಜಯ್ ಭಾರದ್ವಾಜ್(ಕ್ರಿಕೆಟ್), ರಂಭೀರ್ ಸಿಂಗ್(ಕಬಡ್ಡಿ) ಹಾಗೂ ಮಿಝ್‌ಬನ್ ಪಟೇಲ್(ಹಾಕಿ) ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಮನೋಜ್ ಕುಮಾರ್(ಕುಸ್ತಿ), ಲಾಲ್‌ರೆಂಸಂಗಾ(ಆರ್ಚರಿ), ಅರೂಪ್ ಬಾಸಕ್(ಟಿಟಿ), ನಿತಿನ್ ಕೀರ್ತನೆ(ಟೆನಿಸ್) ಹಾಗೂ ಮ್ಯಾನುಯೆಲ್ ಫೆಡ್ರಿಕ್ಸ್(ಹಾಕಿ) ಅವರಿಗೆ ಧ್ಯಾನ್ ಚಂದ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor