ಉಚಿತವಾಗಿ ರೊಟೋ ವೈರಸ್ ಲಸಿಕೆ ವಿತರಣೆ: ಸಚಿವ ಶ್ರೀರಾಮುಲು

Update: 2019-08-30 14:46 GMT

ವಿಜಯಪುರ, ಆ.30: ನವಜಾತ ಶಿಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದ ರೊಟೋ ವೈರಸ್ ಲಸಿಕೆಗಳು ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಸಿಗಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ರೊಟೋ ವೈರಸ್ ಲಸಿಕೆ ಪಡೆಯಲು 4500 ರೂ.ಗಳು ಪಾವತಿ ಮಾಡಬೇಕಿತ್ತು. ಇದರಿಂದ ಬಡವರು ಲಸಿಕೆಗಾಗಿ ಹಣ ನೀಡಲು ಸಾಧ್ಯವಾಗದೇ ಹಿಂದೆ ಸರಿಯುತ್ತಿದ್ದರು. ಆದರೆ, ಸರಕಾರ ಉಚಿತವಾಗಿ ನೀಡಲು ಮುಂದಾಗಿದೆ ಎಂದರು. ಸರಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜನೌಷಧ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಆವರಣದಲ್ಲಿಯೇ ಕಡಿಮೆ ಬೆಲೆಯ ಔಷಧಿಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು. 

ವಿಜಯಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಗರ್ಭಿಣಿಯರು ಮತ್ತು ಬಾಣಂತಿಯರನ್ನು ಭೇಟಿ ಮಾಡಿದರು. ಅಹವಾಲು ಸ್ವೀಕರಿಸಿದ ಅವರು, ವಾರ್ಡಿಗೆ ತೆರಳಿ ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಆರೋಗ್ಯ ವಿಚಾರಿಸಿದರು. ನನಗೂ ನಾಲ್ಕು ಜನ ಮ್ಕಕಳಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದ ಅವರು, ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಜತೆಗೆ ಬರುವ ಸಂಬಂಧಿಕರಿಗಾಗಿ ವಸತಿ, ಬಿಸಿ ನೀರಿನ ವ್ಯವಸ್ಥೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕ್ಯಾಂಟೀನ್ ಆರಂಭಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News