'ಗುಂಪು ಹಲ್ಲೆ ಪ್ರಕರಣ’ ರಾಜ್ಯಕ್ಕೆ ಕಪ್ಪು ಚುಕ್ಕೆ: ಎಸ್‌ಡಿಪಿಐ

Update: 2019-08-30 15:03 GMT
ಇಲ್ಯಾಸ್ ಮುಹಮ್ಮದ್ ತುಂಬೆ

ಬೆಂಗಳೂರು, ಆ.30: ಫೇಸ್‌ಬುಕ್‌ನಲ್ಲಿ ಹಾಕಿದ ಫೋಟೋವನ್ನೇ ನೆಪ ಮಾಡಿಕೊಂಡು ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಕಿಡಿಗೇಡಿಗಳು ಯುವಕನೊಬ್ಬನನ್ನು ಗುಂಪುಗೂಡಿ ಹಲ್ಲೆ ಮಾಡಿದ್ದಾರೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ರಾಜ ಮಹಾರಾಜರು, ಕವಿ-ಋಷಿಗಳು, ಸಂತರು ನೆಲೆಸಿದ ಹಾಗೂ ಶಾಂತಿ ಮತ್ತು ಸಹಬಾಳ್ವೆಗೆ ಪ್ರಸಿದ್ಧವಾದ ಕನ್ನಡನಾಡಿನಲ್ಲಿ ಇಂತಹ ಘಟನೆ ನಡೆದಿರುವುದರಿಂದ ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸದೆ, ಕಿಡಿಗೇಡಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡಾ ಸರಕಾರ ಯಾವುದೇ ಮುಲಾಜಿಲ್ಲದೆ ಅವರ ವಿರುದ್ಧ ಕೋಮು ಪ್ರಚೋದನೆ ಮತ್ತು ಕೋಮು ಗಲಭೆಗೆ ಸಂಚು ಹೂಡಿರುವ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಇಂತಹ ಘಟನೆಗಳು ಇನ್ನೆಂದೂ ಮರುಕಳಿಸದಿರುವಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕೆಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ: ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದಿಂದ ನೀಡಲಾಗುವ ವಿದ್ಯಾರ್ಥಿವೇತನ ಮತ್ತಿತರ ಯೋಜನೆಗಳಿಗೆ ಹಣ ಬಿಡುಗಡೆ ಮಾಡದ ಸರಕಾರಗಳ ಕ್ರಮದ ಹಿಂದೆ ಯಾವ ದುರುದ್ದೇಶ ಆಡಗಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಅವರು ಪ್ರಶ್ನಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರದಿಂದ ನೀಡಲ್ಪಡುವ ವಿದ್ಯಾರ್ಥಿ ವೇತನ ನೀಡುವಲ್ಲಿ ಅತ್ಯಂತ ನಿಧಾನಗತಿ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ತಡೆ ಹಿಡಿಯುವುದರ ಹಿಂದೆ ಸರಕಾರದಿಂದ ಈವರೆಗೂ ಸ್ಪಷ್ಟವಾದ ಉತ್ತರ ಬಂದಿಲ್ಲ ಎಂದು ಅವರು ದೂರಿದ್ದಾರೆ.

ರಾಜ್ಯ ಸರಕಾರ ಕೂಡಾ ಕೇಂದ್ರ ಸರಕಾರದ ಕ್ರಮವನ್ನು ಮುಂದಿಟ್ಟುಕೊಂಡು ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಅರಿವು ಯೋಜನೆಗಳನ್ನು ತಡೆ ಹಿಡಿದಿರುವುದು ಅತ್ಯಂತ ಖಂಡನೀಯ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವುದನ್ನು ಅಲ್ಪಸಂಖ್ಯಾತ ಸಮುದಾಯ ವಿರೋಧಿಸುತ್ತಾ ಬಂದಿದ್ದರೂ, ಸರಕಾರ ನಿರ್ಲಕ್ಷ್ಯ ಧೋರಣೆ ತಾಳಿರುವುದರ ಹಿಂದೆ ಯಾವ ದುರುದ್ದೇಶ ಅಡಗಿದೆ? ಈ ಜ್ವಲಂತ ಪ್ರಶ್ನೆಗೆ ಉತ್ತರಿಸಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News