ಬಾಣಂತಿಯರ ಆರೈಕೆದಾರರಿಗೆ ಜಿಲ್ಲಾಸ್ಪತ್ರೆಗಳಲ್ಲಿ ತಂಗುದಾಣಗಳ ನಿರ್ಮಾಣ: ಸಚಿವ ಬಿ.ಶ್ರೀರಾಮುಲು

Update: 2019-08-30 16:29 GMT

ವಿಜಯಪುರ, ಆ. 30: ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಆರೈಕೆದಾರರ ವಾಸ್ತವ್ಯಕ್ಕೆ ತಂಗುದಾಣಗಳನ್ನು ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ಇಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ, ರೋಗಿಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ, ಅವರ ಆರೈಕೆದಾರರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಹೀಗಾಗಿ ಅವರು ನೆಲ, ಆಸ್ಪತ್ರೆಯ ಆವರಣದಲ್ಲಿ ಮಲಗಿಕೊಳ್ಳುವಂತಹ ದುಸ್ಥಿತಿ ಇದೆ. ಹೀಗಾಗಿ ಅವರಿಗೆ ಪ್ರತ್ಯೇಕವಾಗಿ ತಂಗುದಾಣಗಳನ್ನು ನಿರ್ಮಿಸಲಾಗುವುದು. ಶೌಚಾಲಯ, ಸ್ನಾನಗೃಹ, ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ವಿಜಯಪುರ ಜಿಲ್ಲಾಸ್ಪತ್ರೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆಗಳ ಕುರಿತು ಪರಿಶೀಲನೆ ನಡೆಸಿದ್ದು, ಅಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿ, ಜನತೆಯ ಅಹವಾಲು ಸ್ವೀಕರಿಸಿದ್ದೇನೆ ಎಂದ ಅವರು, ಉಪಾಹಾರ ಮತ್ತು ಊಟವನ್ನು ಕೊಡಬೇಕೋ ಅಥವಾ ಕನಿಷ್ಠ ದರ ನಿಗದಿಪಡಿಸಬೇಕೋ ಎನ್ನುವ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂಸದರು.

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ರೋಟಾ ವೈರಸ್ ಲಸಿಕೆಯನ್ನು ಉಚಿತವಾಗಿ ನೀಡುವಂತೆ ಆದೇಶಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ರೋಟಾ ವೈರಸ್ ಲಸಿಕೆ ಹಾಕಿಸಬೇಕು ಎಂದು ಶ್ರೀರಾಮುಲು ಅವರು ಇದೇ ವೇಳೆ ಮನವಿ ಮಾಡಿದರು. ಈ ವೇಳೆ ಮಾಜಿ ಸಚಿವ ಶಿವಾನಂದ ಪಾಟೀಲ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ವಿಜಯಪುರ ಜಿಲ್ಲಾಸ್ಪತ್ರೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಸೇವೆಗಳ ಕುರಿತು ಪರಿಶೀಲನೆ ನಡೆಸಿ ಅಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿ, ಜನತೆಯ ಅಹವಾಲು ಸ್ವೀಕರಿಸಲಾಯಿತು’

-ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News