ಮದೀನಾ ಮಸ್ಜಿದ್ ರಿಲೀಫ್ ಫೌಂಡೇಶನ್ ವತಿಯಿಂದ ನಿರಾಶ್ರಿತರಿಗೆ ನೆರವು
ರಾಮದುರ್ಗ, ಆ.30: ಬೆಳಗಾವಿ ಜಿಲ್ಲೆಯ ಮದೀನಾ ಮಸ್ಜಿದ್ ರಿಲೀಫ್ ಫೌಂಡೇಶನ್ ವತಿಯಿಂದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳ ಕಿಟ್ ಮತ್ತು 1 ಸಾವಿರ ರೂ.ಗಳಿಂದ 2 ಸಾವಿರ ರೂ.ಧನ ಸಹಾಯವನ್ನು ವಿತರಿಸಲಾಯಿತು.
ಮಳೆಯ ಅವಾಂತರದಿಂದ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಮನೆ ಬಿದ್ದವರಿಗೆ ಮದೀನಾ ಮಸ್ಜಿದ್ ರಿಲೀಫ್ ಫೌಂಡೇಶನ್‌ನವರು ರಾಮದುರ್ಗ ತಾಲೂಕಿನ ಕೆಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ, ಅಲ್ಲಿನ ನಿರಾಶ್ರಿತರಿಗೆ ಅಕ್ಕಿ, ಎಣ್ಣೆ, ಬಟ್ಟೆ, ಸ್ಯಾನಿಟರಿ ಪ್ಯಾಡ್, ಚಾಪೆ, ಬೆಡ್‌ಶೀಟ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು. ಇದಕ್ಕೂ ಮೊದಲು, ಗೋಕಾಕ್, ಅಥಣಿ, ರಾಯಬಾಗ, ಹೂಗಾರ ಸೇರಿದಂತೆ ಅನೇಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯಹಸ್ತ ಚಾಚಿದರು. ಅಲ್ಲದೆ, ರಾಮದುರ್ಗ ತಾಲೂಕಿನ ಹಂಪಿಹೋಳಿ, ಚಿಕ್ಕ ಬೆನ್ನೂರು, ಅವರಾದಿ, ಹಳೆ ತೊರಗಲ್, ಪಡಕೋಟಿ, ಸುನ್ನಾಳ ಸೇರಿದಂತೆ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ನಿರಾಶ್ರೀತರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದರು.
ಮದೀನಾ ಮಸ್ಜಿದ್ ರಿಲೀಫ್ ಫೌಂಡೇಶನ್ ವತಿಯಿಂದ ಕಳೆದ 25-26 ದಿನಗಳಲ್ಲಿ, ಬೆಳಗಾವಿ ಜಿಲ್ಲೆಯ ಗೋಕಾಕ್, ಅಥಣಿ, ರಾಯಬಾಗ, ಹೂಗಾರ ಸೇರಿದಂತೆ ಅನೇಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಒಂದೊಂದು ತಂಡದ ಮೂಲಕ ತೆರಳಿ ಅಲ್ಲಿನ ನಿರಾಶ್ರೀತರಿಗೆ ಸಹಾಯ ಮಾಡುತ್ತಾ ಬಂದಿದ್ದು, ಈವರೆಗೆ ಸುಮಾರು 1 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಪ್ರವಾಹ ಪೀಡಿತ ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಗಫಾರ್ ಶೇಖ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಝುಬೇರ್ ಮುತವಲ್ಲಿ, ಇಮ್ರಾನ್ ಶೇಖ್, ರಹೇಬರ್ ಮಾಲಿ, ಸಲೀಮ್ ಮಾಡಿವಾಲೆ, ತೌಸಿಫ್ ಭಾಗವಾನ್, ಆಸೀಫ್ ಮೊಮಿನ್, ಸರ್ದಾರ್ ಖಾನ್, ಪಂಡಿತಗೌಡ್ರ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.