×
Ad

ಸಂತ್ರಸ್ತರ ಸಂಕಷ್ಟಗಳಿಗೆ ಸರಕಾರ ಸಕಾಲದಲ್ಲಿ ಸ್ಪಂದಿಸಲಿ: ಸಿದ್ದರಾಮಯ್ಯ

Update: 2019-08-30 22:27 IST

ಮಡಿಕೇರಿ ಆ.3: ಮಹಾಮಳೆಯ ಪ್ರವಾಹ ಮತ್ತು ಗುಡ್ಡ ಕುಸಿತಕ್ಕೆ ಸಿಲುಕಿದ ಕೊಡಗಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ, ಸಂತ್ರಸ್ತರ ಸಂಕಷ್ಟಗಳಿಗೆ ಸರ್ಕಾರ ಸೂಕ್ತ ಸ್ಪಂದನ ನೀಡಬೇಕು ಮತ್ತು ನಿರಾಶ್ರಿತರಿಗೆ ಸೂಕ್ತ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

ವೀರಾಜಪೇಟೆ ತಾಲ್ಲೂಕಿನ ತೋರ ಗ್ರಾಮದ ಗುಡ್ಡ ಕುಸಿತದ ಪ್ರದೇಶಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಾಂತ್ವನ ನುಡಿದರಲ್ಲದೆ, ತಮ್ಮ ಮಟ್ಟದಲ್ಲಿ ಸಾಧ್ಯವಾಗುವ ನೆರವನ್ನು ಒದಗಿಸಿಕೊಡುವ ಭರವಸೆ ನೀಡಿದರು.

ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ನೆಲೆ ಕಂಡುಕೊಂಡು ಇದೀಗ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಹಲ ಸಂತ್ರಸ್ತರು ತಮ್ಮ ಜಾಗಕ್ಕೆ ಪಟ್ಟೆಯನ್ನು ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡ ಪ್ರಸಂಗವೂ ಈ ಸಂದರ್ಭ ನಡೆಯಿತು.

ಒತ್ತುವರಿ ತೆರವಿಗೆ ಒತ್ತಾಯ
ಕೆದಮುಳ್ಳೂರು  ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದನ್ನು ತೆರವುಗೊಳಿಸಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದವರಿಗೆ ನೆಲೆ ಒದಗಿಸಬೇಕೆಂದು ಹಲ ಸಂತ್ರಸ್ತರು ಮನವಿ ಮಾಡಿಕೊಂಡರು.

ಈ ಸಂದರ್ಭ ಸಿದ್ದರಾಮಯ್ಯ ಅವರು, ಈ ಗ್ರಾಮವನ್ನು ಹೊರತು ಪಡಿಸಿ ಬೇರೆಡೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿದರೆ ತೆರಳುತ್ತೀರ ಎಂದು ಪ್ರಶ್ನಿಸಿದಾಗ ಹಲ ಸಂತ್ರಸ್ತರು, ತಾವು ಕಳೆದ ಎರಡು ಮೂರು ದಶಕಗಳಿಂದ ಇದೇ ಗ್ರಾಮದಲ್ಲಿ ನೆಲೆಸಿದ್ದು, ಇಲ್ಲೇ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿಕೊಂಡರು.

ಸಿದ್ದಾಪುರಕ್ಕೆ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆಪೀಡಿತ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ನೆಲ್ಲಿಹುದಿಕೇರಿ ಗ್ರಾಮಗಳಿಗೂ ಭೇಟಿ ನೀಡಿ, ಅಲ್ಲಿನ ಪರಿಹಾರ ಕೇಂದ್ರಗಳಲ್ಲಿನ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರಲ್ಲದೆ, ಕರಡಿಗೋಡಿನಲ್ಲಿ ಕಾವೇರಿ ಪ್ರವಾಹದಿಂದ ನೆಲಸಮವಾದ ಮನೆಗಳನ್ನು ವೀಕ್ಷಿಸಿದರು.

ಈ ಸಂದರ್ಭ ನೆರೆ ಸಂತ್ರಸ್ತರು ತಾವು ಹಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ವರ್ಷಂಪ್ರತಿ ಪ್ರವಾಹದಿಂದ ನಮ್ಮ ಮನೆಗಳು ಜಲಾವೃತವಾಗುತ್ತವೆ. ಈ ವರ್ಷದ ಪ್ರವಾಹಕ್ಕೆ ಹಲವು ಮನೆಗಳು ನೆಲಕಚ್ಚಿದ್ದು, ನಾವು ನಿರಾಶ್ರಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಭಾಗದಲ್ಲಿನ ಬೆಳೆಗಾರರು ಏಕರೆಗಟ್ಟಲೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಗುರುತಿಸಿ ತೆರವು ಮಾಡುವ ಮೂಲಕ ಅಲ್ಲಿ ನಮಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.

ಸಿದ್ದರಾಮಯ್ಯ ಅವರು ಮಾತನಾಡಿ, ಆದಷ್ಟು ಶೀಘ್ರ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸುರಕ್ಷಿತ ಪ್ರದೇಶದಲ್ಲಿ ನೀವೇಶನ ಗುರುತಿಸಿ, ಅಲ್ಲಿ ಮನೆಗಳನ್ನು ನಿರ್ಮಿಸಿ ನದಿ ದಡಗಳಿಂದ ಸ್ಥಳಾಂತರಿಸಬೇಕೆಂದು ಸರ್ಕಾರವನ್ನು ಇದೇ ಸಂದರ್ಭ ಒತ್ತಾಯಿಸಿದರು.

ವಿಕೋಪಕ್ಕೆ ಸಿಲುಕಿದ ಗ್ರಾಮಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ, ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ, ಎಂ.ಹೆಚ್. ಮೂಸ, ಟಿ.ಹೆಚ್.ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ಸೇಡಿನ ರಾಜಕಾರಣ: ಸಿದ್ದು ಅಸಮಾಧಾನ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇಡಿ ನಡೆಸುತ್ತಿರುವ ಕಾರ್ಯಾಚರಣೆ ಸೇಡಿನ ರಾಜಕಾರಣದ ಭಾಗವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಕುಮಾರ್ ಅವರ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದ್ದು, ಹಲವು ಸಂಸ್ಥೆಗಳನ್ನು ಇದಕ್ಕಾಗಿ ಬಳಸಿಕೊಳ್ಳಾಗುತ್ತಿದೆ. ಈ ಹಿಂದೆ ಗುಜರಾತ್ ರಾಜ್ಯದ ಕಾಂಗ್ರೆಸ್ ಶಾಸಕರುಗಳಿಗೆ ಆಶ್ರಯ ಕಲ್ಪಿಸಿದ ಕಾರಣಕ್ಕಾಗಿ ಸೇಡಿನ ಮನೋಭಾವದಿಂದ ಶಿವಕುಮಾರ್ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News