ಆಗಸ್ಟ್ 31ರಿಂದ ಮುಳ್ಳಯ್ಯನಗಿರಿ ಪ್ರವಾಸಿಗರ ವಾಹನ ಸಂಚಾರ ನಿಷೇಧ

Update: 2019-08-30 18:59 GMT

ಚಿಕ್ಕಮಗಳೂರು, ಆ.30: ಕೆಮ್ಮಣ್ಣುಗುಂಡಿ ಕ್ರಾಸ್ ಮತ್ತು ಕೈಮರ ತಪಾಸಣಾ ಕೇಂದ್ರದ ಮೂಲಕ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಚಾರವನ್ನು ಆ.31ರಿಂದ ಸೆ.3 ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ಇತರೆ ಭಾಗಗಳಲ್ಲಿ ಭೂಕುಸಿತ ಉಂಟಾಗಿ ಗಾಳಿ, ಮಳೆಗೆ ಮರಗಳು ಉರುಳಿ ಬೀಳುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುರಕ್ಷಿತ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರವಾಸಿ ತಾಣಗಳಿಗೆ ತೆರಳುವ ಮಾರ್ಗದಲ್ಲಿ ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ವಾಹನಗಳು ಸಂಚರಿಸಿದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ ನಿರ್ಬಂಧಿಸಲಾಗಿದೆ.

ಬಾಬಾ ಬುಡನ್‍ಗಿರಿ ಐ.ಡಿ ಪೀಠಕ್ಕೆ ತೆರಳುವ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ಆ.31ರಿಂದ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News