ಶೈಕ್ಷಣಿಕ ವರ್ಷದ ಮೊದಲ ದಿನವೇ ಸಮವಸ್ತ್ರ, ಪಠ್ಯಪುಸ್ತಕ: ಕ್ರಮ ವಹಿಸಲು ಶಿಕ್ಷಣ ಸಚಿವರ ಸೂಚನೆ

Update: 2019-08-30 18:18 GMT

ಬೆಂಗಳೂರು, ಆ.30: ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭದ ದಿನವೇ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಕ್ರಮ ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಧಾನೌಧದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಹಲವಾರು ಸೂಚನೆಗಳನ್ನು ನೀಡಿದರು. ಮಕ್ಕಳಿಗೆ ನೀಡುವ ಬೈಸಿಕಲ್‍ಗಳ ಮತ್ತು ಬಿಡಿಭಾಗಗಳ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಪದೇ ಪದೇ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಕೇಂದ್ರ ಸರರ್ಕರ ನಿಗದಿಪಡಿಸಿರುವ ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷಿಸಿ ನಂತರ ಸೈಕಲ್ ವಿತರಿಸಲು ಕ್ರಮ ವಹಿಸುವಂತೆ ಅವರು ಸೂಚಿಸಿದರು.

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮನೆ-ಮಠ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳ ವಿದ್ಯಾರ್ಥಿಗಳಿಗೆ 11 ಲಕ್ಷ ಪುಸ್ತಕ, ನೋಟ್‍ಬುಕ್, ಪೆನ್ ಸೇರಿದಂತೆ ಪಠ್ಯೋಪಕರಣಗಳನ್ನು ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಅಲ್ಲದೇ, ನೆರೆ ಸಂತ್ರಸ್ತ ಕುಟುಂಬದವರು ಶಾಲೆಗಳಲ್ಲಿ ಆಶ್ರಯ ತೆಗೆದುಕೊಂಡ ಸಂದರ್ಭದಲ್ಲಿ ಶಾಲೆ ನಡೆಯದ ದಿನಗಳು ಮತ್ತು ವಿಪರೀತ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಆಯಾ ಜಿಲ್ಲಾಧಿಕಾರಿಗಳ ಆದೇಶದಂತೆ ಶಾಲೆಗಳಿಗೆ ರಜೆ ನೀಡಿದ ದಿನಗಳ ಶಾಲಾ ದಿನ ಕಡಿತವನ್ನು ಸರಿದೂಗಿಸಲು (ಕಾಂಪನ್ಸೇಟ್) ಆಯಾ ಶಾಲೆಗಳಿಗೆ ನೀಡಿದ ರಜಾದಿನಗಳಿಗೆ ಅನುಗುಣವಾಗಿ (ಶಾಲಾವಾರು ಪರಿಗಣನೆ) ಶಾಲಾ ದಿನಗಳನ್ನು ಸರಿದೂಗಿಸಲು  ಮ ವಹಿಸಲು ಆಯಾ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಿಗೆ (ಡಿಡಿಪಿಐ) ಸುರೇಶ್ ಕುಮಾರ್ ತಿಳಿಸಿದರು.

ಕೆಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್-ಟೆಕ್ಕಿಗಳು ವಾರಾಂತ್ಯದ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಮತ್ತು ಇತರೆ ವಿಷಯಗಳಲ್ಲಿ ಬೋಧನೆ ಮಾಡಲು ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಯಾವ ರೀತಿ ಬಳಸಿಕೊಳ್ಳಬಹುದೆಂಬುದಕ್ಕೆ ಒಂದು ವ್ಯವಸ್ಥೆ ರೂಪಿಸಿ ಆ ಸಂಬಂಧದಲ್ಲಿ ಡಿಡಿಪಿಐಗಳಿಗೆ ಮಾರ್ಗದರ್ಶನ ನೀಡಲು ಅವರು ಸೂಚನೆ ನೀಡಿದರು.

ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ವಿಧಾನವನ್ನು ಚುರುಕುಗೊಳಿಸಲು ಒಂದು ಸಮಯದ ಚೌಕಟ್ಟು-ಟೈಂಬೌಂಡ್‍ನೊಂದಿಗೆ    ಅದಕ್ಕೊಂದು ಮೈಲಿಗಲ್ಲು ರೂಪಿಸಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದರು.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ಮುಷ್ಕರದ ಆತಂಕ ಎದುರಾಗುತ್ತಾ ಬಂದಿದೆ. ಮುಂದಿನ ಭವಿಷ್ಯದ ಕುರಿತು ಆಲೋಚನೆಯಲ್ಲಿರುವ ನಮ್ಮ ಮಕ್ಕಳಿಗೆ ಇದರಿಂದ ಭ್ರಮನಿರಸನವಾಗುವುದನ್ನು ತಡೆಯಲು ಮೊದಲೇ ಅಗತ್ಯ ಕ್ರಮಗಳನ್ನು ಕೈಗೊಂಡು ಯಾವುದೇ ಮುಷ್ಕರವಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲು ಅವರು ಅಧಿಕಾರಿಗಳಿಗೆ ಹೇಳಿದರು. 

ಶಿಕ್ಷಕ ವರ್ಗಾವಣೆ ಸಮಸ್ಯೆ ಕುರಿತು ಇಲಾಖಾಧಿಕಾರಿಗಳೊಂದಿಗೆ ಎಲ್ಲಾ ಆಯಾಮಗಳಲ್ಲಿ ಚರ್ಚಿಸಲಾಯಿತು. ಸೆ.3ರಂದು ಸಭೆ ನಡೆಸಿ ಕೂಡಲೇ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಉಳಿದಂತೆ ಇಲಾಖೆಯಲ್ಲಿ ಶಾಶ್ವತವಾದ ಗುರಿಯಾಧಾರಿತ ಯೋಜನೆಗಳನ್ನು ರೂಪಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News