ವಾಹನ ಚಾಲನಾ ಪರವಾನಿಗೆ ಪಡೆಯಲು ಇನ್ನು ವಿದ್ಯಾರ್ಹತೆ ಬೇಕಿಲ್ಲ: ಶಾಸಕ ಎಸ್.ಎ.ರಾಮದಾಸ್

Update: 2019-08-31 09:02 GMT

ಮೈಸೂರು, ಆ.31: ಇನ್ನು ಮುಂದೆ ವಾಹನ ಚಾಲನಾ ಪರವಾನಿಗೆ ಪಡೆಯಲು ವಿದ್ಯಾರ್ಹತೆ ಬೇಕಿಲ್ಲ ಎಂದು ಕೇಂದ್ರ ಸರಕಾರ ಹೊಸ ಸುತ್ತೋಲೆ ಹೊರಡಿಸಿದೆ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅದೆಷ್ಟೊ ಮಂದಿ ಬಳಿ ವಾಹನ ಚಾಲನಾ ಪರವಾನಿಗೆಯೇ ಇರಲಿಲ್ಲ, ಕನಿಷ್ಠ 8ನೇ ತರಗತಿ ಪಾಸಾದವರಿಗೆ ಮಾತ್ರ ವಾಹನ ಪರವಾನಿಗೆ ನೀಡಲಾಗುತಿತ್ತು. ಇದರಿಂದ ಏನು ಓದದೆ ಇರುವ ದೇಶಾದ್ಯಂತ ಒಟ್ಟು 67 ಲಕ್ಷ ಮಂದಿ ಪರವಾನಿಗೆ ಇಲ್ಲದೆ ಕದ್ದು ಮುಚ್ಚಿ ವಾಹನ ಚಾಲನೆ ಮಾಡುತ್ತಿದ್ದರು. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಭಾರತ್ ಇನ್ಫಾರ್ಮಲ್ ವರ್ಕರ್ಸ್ ಇನಿಶಿಯೇಟಿವ್ ಸಂಸ್ಥೆಯೊಂದಿಗೆ ನಾನು ಸೇರಿದಂತೆ ಹಲವರು ದೇಶಾದ್ಯಾಂತ ಅಸಂಘಟಿತ ಕೆಲಸಗಾರರಾದ ವಾಹನ ಚಾಲಕರುಗಳ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದೆವು ಎಂದು ತಿಳುಸಿದರು.

ನಮ್ಮ ವರದಿಯನ್ನು ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಂದಿನ ಕೇಂದ್ರ ಸಚಿವ ದಿ.ಅನಂತ್ ಕುಮಾರ್ 2017ರಲ್ಲಿ ಲೋಕಸಭೆಯಲ್ಲಿ ಈ ಬಿಲ್ ಮಂಡಿಸಿ ಅನುಮೋದನೆ ಪಡೆದಿದ್ದರು. ರಾಜ್ಯಸಭೆಯಲ್ಲಿ ಈ ಬಿಲ್ ಮಂಡಿಸಲಾಗಿತ್ತಾದರೂ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ ವಿರೋಧ ವ್ಯಕ್ತಪಡಿಸಿದ್ದವು. ನಂತರ ರಾಜ್ಯಸಭಾ ಸದಸ್ಯ ವಿನಯ್ ಸಹಸ್ರ ಬದ್ದೆ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ರಚನೆ ಮಾಡಿ ದೇಶಾದ್ಯಂತ 67 ಲಕ್ಷ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುತ್ತಿರುವವರನ್ನು ಭೇಟಿ ಮಾಡಿ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ರಾಜ್ಯಸಭೆ ಮುಂದೆ ತರಲಾಯಿತು. ನಂತರ ಅಲ್ಲಿಯೂ ಬಿಲ್ ಪಾಸಾಗಿದೆ ಎಂದು ಹೇಳಿದರು.

ನಂತರ ಕೇಂದ್ರ ಸರಕಾರ ಗೆಜಟ್ ನೋಟಿಫಿಕೇಶನ್ ಮನನ ಮಾಡಿ ಎಲ್ಲಾ ರಾಜ್ಯ ಸರಕಾರಗಳಿಗೂ ಸುತ್ತೋಲೆಯನ್ನು ಹೊರಡಿಸಿದೆ. ಈ ಸಂಬಂಧ ಸೆ.1ರಿಂದ ಇದು ಜಾರಿಯಾಗಲಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಯಾರು ಪರವಾನಿಗೆ ಹೊಂದಿಲ್ಲದ ಗೂಡ್ಸ್, ಆಟೋ, ಲಾರಿ, ಟ್ರ್ಯಾಕ್ಟರ್, ರೂಡ್ ರೋಲರ್ ಸೇರಿದಂತೆ ಇತರ ವಾಹನಗಳನ್ನು ಚಾಲನೆ ಮಾಡುವವರು  ಸೆ.4ರಂದು ಗನ್ ಹೌಸ್ ವೃತ್ತದಲ್ಲಿರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಬಂದು ಆರ್.ಟಿ.ಒ. ಅಧಿಕಾರಿಗಳ ಬಳಿ ನೋಂದಣಿ ಮಾಡುಕೊಂಡರೆ ಮೊದಲ ಹಂತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನವಾದ ಸೆ.17ರಂದು ವಾಹನ ಚಾಲನಾ ಪರವಾನಿಗೆಯನ್ನು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ವಸತಿ ಸಚಿವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವಿ‌.ಸೋಮಣ್ಣ ವಿತರಣೆ ಮಾಡುವರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News