ಸೆ.1ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಮುಖ್ಯ ಚುನಾವಣಾಧಿಕಾರಿ

Update: 2019-08-31 13:14 GMT
ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಬೆಂಗಳೂರು, ಆ.31: ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಸೆ.1ರಿಂದ ಪರಿಷ್ಕರಿಸಲಾಗುತ್ತಿದ್ದು, 2020ರ ಜನವರಿ 1ಕ್ಕೆ 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಶನಿವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ.1 ರಿಂದ ಅ.15ರವರೆಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಅಭಿಯಾನ ನಡೆಯಲಿದೆ ಎಂದರು.

ಈ ಅಭಿಯಾನದ ವೇಲೆ ಮತದಾರರ ಹೆಸರು ಕೈ ಬಿಡುವುದು, ತಿದ್ದುಪಡಿ ಮಾಡುವುದು, ಭಾವಚಿತ್ರಗಳ ಬದಲಾವಣೆಯಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು. ಈ ವೇಳೆ ಮತದಾರರು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಡಿತರ ಚೀಟಿ ಅಥವಾ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿರುವ ಯಾವುದಾದರೂ ದಾಖಲಾತಿಯನ್ನು ನೀಡಬೇಕು ಎಂದು ಅವರು ಹೇಳಿದರು.

ವಿಶೇಷ ಪರಿಷ್ಕರಣಾ ಅಭಿಯಾನವನ್ನು ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನಡೆಸಲಾಗುವುದು. ಸೆ.1 ರಿಂದ 30ರವರೆಗೆ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಅ.15ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು. ನ.30ರವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು ಎಂದು ಸಂಜೀವ್ ಕುಮಾರ್ ತಿಳಿಸಿದರು.

ನ.2(ಶನಿವಾರ), 3(ರವಿವಾರ), 9(ಶನಿವಾರ) ಹಾಗೂ 10(ರವಿವಾರ)ರಂದು ವಿಶೇಷ ಅಭಿಯಾನವನ್ನು ನಡೆಸಲಾಗುವುದು. ಡಿ.31ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹಾಗೂ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 2020ರ ಜನವರಿ 8ರಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

2019ರ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ 2,58,01,408(ಪುರುಷರು), 2,52,48,925(ಮಹಿಳೆಯರು) ಹಾಗೂ 4839(ಇತರರು) ಸೇರಿ ಒಟ್ಟು 5,10,55,172 ಮತದಾರರಿದ್ದರು. ಇಂದಿನವರೆಗೆ 2,58,01,694(ಪುರುಷರು), 2,52,54,153(ಮಹಿಳೆಯರು) ಹಾಗೂ 4651(ಇತರರು) ಸೇರಿ ಒಟ್ಟು 5,10,60,498 ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಮತದಾರರು ‘Voter helpline’ ಮೊಬೈಲ್ ಆ್ಯಪ್, ಎನ್‌ವಿಎಸ್‌ಪಿ ಪೋರ್ಟಲ್, ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ), ಇಆರ್‌ಓ ಕಚೇರಿ, ಮತದಾರರ ಸಹಾಯವಾಣಿ 1950ಗೆ ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಮತದಾರರ ವಿವರಗಳಲ್ಲಿ ಯಾವುದಾದರೂ ತಿದ್ದುಪಡಿ ಮಾಡಬೇಕಿದ್ದಲ್ಲಿ ಅರ್ಜಿ ಸಂಖ್ಯೆ 8 ಅನ್ನು ಭರ್ತಿ ಮಾಡಿ, ಆಧಾರ್, ಪಾಸ್‌ಪೋರ್ಟ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಅಥವಾ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿರುವ ದಾಖಲಾತಿಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು ಎಂದು ಸಂಜೀವ್ ಕುಮಾರ್ ತಿಳಿಸಿದರು.

ಜಿಲ್ಲಾವಾರು ಮತದಾರರ ಸಂಖ್ಯೆ: ಬೆಳಗಾವಿ(37,72,561), ಬಾಗಲಕೋಟೆ(15,11,555), ಬಿಜಾಪುರ(17,95,943), ಗುಲ್ಬರ್ಗ(21,29,439), ಬೀದರ್(13,47,789), ರಾಯಚೂರು(16,22,686), ಕೊಪ್ಪಳ(10,88,752), ಗದಗ(8,54,208), ಧಾರವಾಡ(15,09,706), ಉತ್ತರ ಕನ್ನಡ(11,54,486), ಹಾವೇರಿ(12,56,603), ಬಳ್ಳಾರಿ(19,60,650), ಚಿತ್ರದುರ್ಗ(13,49,368).
ದಾವಣಗೆರೆ(16,32,513), ಶಿವಮೊಗ್ಗ(14,47,424), ಉಡುಪಿ(10,06,753), ಚಿಕ್ಕಮಗಳೂರು(9,33,606), ತುಮಕೂರು(22,10,116), ಚಿಕ್ಕಬಳ್ಳಾಪುರ (10,17,932), ಕೋಲಾರ(12,13,258), ಬೆಂಗಳೂರು ಗ್ರಾಮಾಂತರ (8,17,384), ರಾಮನಗರ(8,74,460), ಮಂಡ್ಯ(15,04,289).
ಹಾಸನ(14,49,823), ದಕ್ಷಿಣ ಕನ್ನಡ(17,24,794), ಕೊಡಗು(4,41,186), ಮೈಸೂರು(25,08,645), ಚಾಮರಾಜನಗರ(8,35,960), ಬಿಬಿಎಂಪಿ ಕೇಂದ್ರ(17,25,100), ಬಿಬಿಎಂಪಿ ಉತ್ತರ(21,01,714), ಬಿಬಿಎಂಪಿ ದಕ್ಷಿಣ(20,02,037), ಬೆಂಗಳೂರು ನಗರ(32,71,351) ಹಾಗೂ ಯಾದಗಿರಿ(9,88,407) ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ ಮಾಹಿತಿ ನೀಡಿದರು.

'ಚುನಾವಣೆ ನಡೆಸಲು ಸಿದ್ಧ'
ಯಾವುದೇ ಮತ ಕ್ಷೇತ್ರವು ಪ್ರತಿನಿಧಿಯಿಲ್ಲದೆ ಖಾಲಿಯಾದ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ನಾವು ಸಿದ್ಧ. ಆದರೆ, ಈ ವಿಚಾರದ ಕುರಿತು ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಬೇಕು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ, ನ್ಯಾಯಾಲಯ ನೀಡುವ ತೀರ್ಪಿನಂತೆ ಚುನಾವಣಾ ಆಯೋಗ ಮುಂದುವರೆಯುತ್ತದೆ. ಒಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಚುನಾವಣೆ ನಡೆಸಲು ಸಾಧ್ಯವಿಲ್ಲ.
-ಸಂಜೀವ್‌ಕುಮಾರ್,ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News