×
Ad

'ನೀರಿಲ್ಲದ ಊರಿಗೆ ವರ್ಗಾಯಿಸುತ್ತೇನೆ..!': ಪೊಲೀಸ್ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

Update: 2019-08-31 18:52 IST

ಶಿವಮೊಗ್ಗ, ಆ. 31: 'ಕಲ್ಬುರ್ಗಿಯಂತಹ ನೀರಿಲ್ಲದ ಊರಿಗೆ ವರ್ಗಾವಣೆ ಮಾಡಬೇಕಾಗುತ್ತದೆ...!' ಇದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಆಕ್ರೋಶಭರಿತ ಮಾತುಗಳು. 
ಶನಿವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಯೋಜಿತವಾಗಿದ್ದ ನೆರೆ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಹರಿಹಾಯ್ದರು. 

ಗ್ರಾಮಾಂತರ ಭಾಗಗಳಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರು ಸಣ್ಣಪುಟ್ಟ ಮನೆ ದುರಸ್ತಿ ಕಾರ್ಯಕ್ಕೆ ರಸ್ತೆ ಬದಿ ನೀರು ಹರಿಯುವ ಹಳ್ಳ-ದಿಣ್ಣೆಗಳಿಂದ ಮರಳು ಒಯ್ದರೆ ಪೊಲೀಸ್ ಮತ್ತು ಅರಣ್ಯ ಇಲಾಖೆಯವರು ವಶಕ್ಕೆ ಪಡೆಯುತ್ತಿದ್ದಾರೆ. ಕೇಸ್ ದಾಖಲಿಸುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ನಾಗರಾಜ್‍ರವರು ಸಿಎಂ ಗಮನಕ್ಕೆ ತಂದರು. 

ಇದರಿಂದ ಆಕ್ರೋಶಗೊಂಡ ಬಿ.ಎಸ್.ಯಡಿಯೂರಪ್ಪರವರು, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಕಡೆ ತಿರುಗಿದರು. ಜನರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ತೊಂದರೆ ಕೊಡುವ ಅಧಿಕಾರಿಗೆ ಸೂಚನೆ ಕೊಡಿ. ಇಲ್ಲದಿದ್ದರೆ ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದು ಗರಂ ಆದರು. 

ಇದೇ ವೇಳೆ ಸಾಗರ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಲಿಂಗನಮಕ್ಕಿ ಜಲಾಶಯದಲ್ಲಿ ಪರವನಾಗಿ ಹೊಂದಿದ ಮೀನುಗಾರರ ಬಲೆ-ಬೋಟ್‍ಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಮೀನು ಹಿಡಿಯಲಾಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂಗೆ ತಿಳಿಸಿದರು. 

ಇದರಿಂದ ಮತ್ತಷ್ಟು ಕೋಪಗೊಂಡ ಸಿಎಂ, ಅರಣ್ಯ ಇಲಾಖಾಧಿಕಾರಿಗಳೆಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಸಭೆಗೆ ಗೈರು ಹಾಜರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನೆರೆ ಹಾವಳಿ ಸಭೆಯಿದಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿ ಬಂದಿಲ್ಲವೆಂದು ಡಿ.ಸಿ. ಕೆ.ಬಿ.ಶಿವಕುಮಾರ್ ಸಮಜಾಯಿಷಿ ನೀಡಿದರು. ಮೀನುಗಾರರಿಂದ ವಶಕ್ಕೆ ಪಡೆದಿರುವ ಉಪಕರಣಗಳನ್ನು ತಕ್ಷಣವೇ ವಾಪಾಸ್ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News