×
Ad

ಚಿಕ್ಕಮಗಳೂರು: ಪ್ರೇಯಸಿ, ಆಕೆಯ ಪತಿಯನ್ನು ಹತ್ಯೆಗೈದ ಪ್ರಿಯಕರ

Update: 2019-08-31 19:53 IST
ಮೃತಪಟ್ಟ ದಂಪತಿ

ಚಿಕ್ಕಮಗಳೂರು, ಆ.31: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪ್ರೇಯಸಿ ತನ್ನಿಂದ ದೂರವಾಗಿದ್ದರಿಂದ ಬೇಸತ್ತು, ಪ್ರೇಯಸಿ ಹಾಗೂ ಆಕೆಯ ಪತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಾತ್ಕೋಳಿ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತ್ಕೋಳಿ ಗ್ರಾಮದ ಧರ್ಮಯ್ಯ(40) ಹಾಗೂ ಈತನ ಪತ್ನಿ ಭಾರತಿ(28) ಹತ್ಯೆಗೊಳಗಾದ ದಂಪತಿಯಾಗಿದ್ದು, ಹತ್ಯೆ ಆರೋಪಿ ಗೋವಿಂದ ಎಂಬಾತ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.

ಸಾತ್ಕೋಳಿ ಗ್ರಾಮದ ಧರ್ಮಯ್ಯ ಹಾಗೂ ಭಾರತಿ ದಂಪತಿ ಕೂಲಿ ಕಾರ್ಮಿಕರಾಗಿದ್ದು, ಧರ್ಮಯ್ಯನ ಪತ್ನಿ ಭಾರತಿಗೆ ಇದೇ ಗ್ರಾಮದ ಗೋವಿಂದ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ಧರ್ಮಯ್ಯನಿಗೆ ತಿಳಿದು ಗೋವಿಂದ ಹಾಗೂ ಧರ್ಮಯ್ಯನ ನಡುವೆ ಜಗಳವೂ ನಡೆದಿತ್ತು ಎಂದು ತಿಳಿದು ಬಂದಿದೆ. 1 ತಿಂಗಳ ಹಿಂದೆ ಇದೇ ವಿಚಾರವಾಗಿ ಗೋವಿಂದ ಹಾಗೂ ಧರ್ಮಯ್ಯನ ನಡುವೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಗೋವಿಂದ ಧರ್ಮಯ್ಯನನ್ನು ಹತ್ಯೆ ಮಾಡಲು ಮಚ್ಚಿನಿಂದ ಹಲ್ಲೆ ಮಾಡಿದ ವೇಳೆ ಭಾರತಿ ಅಡ್ಡ ಬಂದಿದ್ದಳು. ಹಲ್ಲೆಯಿಂದಾಗಿ ಭಾರತಿ ಬೆನ್ನಿಗೆ ಮಚ್ಚಿನೇಟು ಬಿದ್ದಿತ್ತು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಬಳಿಕ ಗ್ರಾಮಸ್ಥರ ರಾಜಿ ಸಂದಾನದ ಬಳಿಕ ಭಾರತಿ ಗೋವಿಂದನ ಸಹಾವಾಸ ಬಿಟ್ಟಿದ್ದಳೆಂದು ತಿಳಿದು ಬಂದಿದೆ.

ಭಾರತಿ ತನ್ನಿಂದ ದೂರವಾದದ್ದರಿಂದ ಬೇಸತ್ತಿದ್ದ ಗೋವಿಂದ ಶನಿವಾರ ಧರ್ಮಯ್ಯನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಧರ್ಮಯ್ಯ ಹಾಗೂ ಭಾರತಿ ಇಬ್ಬರೂ ಗೋವಿಂದನ ವಿರುದ್ಧ ತಿರುಗಿಬಿದ್ದ ಪರಿಣಾಮ ಕುಪಿತಗೊಂಡ ಗೋವಿಂದ ಸ್ಥಳದಲ್ಲಿದ್ದ ಮಚ್ಚಿನಿಂದ ಧರ್ಮಯ್ಯ ಹಾಗೂ ಭಾರತಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.

ಹತ್ಯೆ ಬಳಿಕ ಆರೋಪಿ ಗೋವಿಂದ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News