ವಿಶ್ವವಿಖ್ಯಾತ ಮೈಸೂರು ದಸರಾ-2019ರ ವೆಬ್‍ಸೈಟ್, ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ವಿ.ಸೋಮಣ್ಣ

Update: 2019-08-31 15:48 GMT

ಮೈಸೂರು,ಆ.31: ವಿಶ್ವವಿಖ್ಯಾತ ಮೈಸೂರು ದಸರಾ-2019 ರ ವೆಬ್ ಸೈಟ್, ಲೋಗೋ ಮತ್ತು ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಕನ್ನಡ, ಇಂಗ್ಲೀಷ್ ಸೇರಿದಂತೆ ಹತ್ತು ಭಾಷೆಗಳಲ್ಲಿ ಪೋಸ್ಟರ್ ಅನ್ನ ಬಿಡುಗಡೆಗೊಳಿಸಲಾಗಿದೆ. ದಸರಾ ವೆಬ್‍ಸೈಟ್‍ನಲ್ಲೇ ಪ್ರವಾಸಿಗರು ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ. ದಸರಾ ಪ್ರಚಾರದ ಬಗ್ಗೆ ಮೈಸೂರು ಸೇರಿದಂತೆ ಇತರ ನಗರಗಳಲ್ಲಿ ಪೋಸ್ಟರ್ ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.

ದಸರಾ ಆಚರಣೆಗೆ ಸಂಬಂಧಪಟ್ಡಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇಂತಿಂತಿಹ ಜವಾಬ್ದಾರಿ ನಿಮ್ಮದು ಎಂದು ಅಧಿಕಾರಿಗಳಿಗೆ ವಹಿಸಲಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯನ್ನು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಅವರಿಗೆ ವಹಿಸಲಾಗಿದೆ, ಹಾಗೆ ಮಂಡ್ಯ ಉಸ್ತುವಾರಿಯನ್ನು ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಈ ಬಾರಿಯ ದಸರಾ ಆಚರಣೆಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
  
ವೆಬ್‍ಸೈಟ್ ಉದ್ಘಾಟನೆ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಅಹಮದ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಸಿಇಓ ಕೆ.ಜ್ಯೋತಿ, ಎಸ್ಪಿ ರಿಷ್ಯಂತ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಅರ್ಚನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News