ಹಾಸನ: ಸುಪಾರಿ ನೀಡಿ ತಂದೆಯನ್ನು ಕೊಲೆಗೈದು 'ನಾಪತ್ತೆಯಾಗಿದ್ದಾರೆ' ಎಂದು ದೂರು ನೀಡಿದ ಪುತ್ರಿ

Update: 2019-08-31 17:33 GMT

ಹಾಸನ, ಆ.31: ಪ್ರಿಯಕರನ ಜೊತೆ ಸೇರಿ ಮಗಳೊಬ್ಬಳು ಸುಪಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾವ್ ವಿಲಾಸ್ ಸಪೆಟ್, ಕೆಲ ದಿನಗಳ ಹಿಂದೆ ಆಲೂರು ತಾಲೂಕಿನ ಹೇಮಾವತಿ ಹಿನ್ನೀರಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ ಹೆಚ್ಚಲು ಆರಂಭಿಸಿದ್ದ ಪೊಲೀಸರು, ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆಂದು ವಿವರಿಸಿದರು.

ಆರೋಪಿ ವಿದ್ಯಾ ತನ್ನ ಪ್ರಿಯಕರ ಚಿದಾನಂದ್‌ನೊಂದಿಗೆ ಸೇರಿ ಬೆಂಗಳೂರಿನ ಮುನೇಶ್ವರ ನಗರದ ನಿವಾಸಿ ಹಾಗೂ ಚಾಲಕ ತಂದೆ ಮುನಿರಾಜು(48) ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಲ್ಲದೆ, 15 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಳು. ಈಕೆಗೆ ಈಗಾಗಲೇ ಮದುವೆಯಾಗಿದ್ದು, ಚಿದಾನಂದ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ತಂದೆ ಮುನಿರಾಜ್ ವಿರೋಧಿಸಿದ್ದರು. ಅಲ್ಲದೆ, ವಿದ್ಯಾಳಿಗೆ ಅಪಘಾತವೊಂದರ ಪರಿಹಾರ ರೂಪದಲ್ಲಿ ದೊಡ್ಡ ಮಟ್ಟದ ಹಣ ಬಂದಿತ್ತು. ಈ ನಡುವೆ ಪತಿಯಿಂದ ವಿಚ್ಚೇಧನ ಪಡೆದಿದ್ದ ವಿದ್ಯಾಗೆ ಪತಿ ಕಡೆಯಿಂದಲೂ ಹಣ ಪಾವತಿಯಾಗಿತ್ತು. ಈ ಹಣವನ್ನು ನೀಡುವಂತೆ ತಂದೆ ಮುನಿರಾಜು ವಿದ್ಯಾಳನ್ನು ಪೀಡಿಸುತ್ತಿದ್ದರು ಎಂಬುದು ವಿದ್ಯಾಳ ಆರೋಪವಾಗಿದ್ದು, ತನ್ನ ಪ್ರಿಯಕರನೊಂದಿಗೆ ಓಡಾಡುವುದನ್ನು ವಿರೋಧಿಸುತ್ತಿದ್ದ ಆಕೆ ತಂದೆಯನ್ನು ಹತ್ಯೆ ಮಾಡಲು ಪ್ರಿಯಕರನಿಗೆ ರೂ. 15 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಅದರಂತೆ ಆ.23ರಂದು ಮುನಿರಾಜು ಅವರನ್ನು ಹತ್ಯೆ ಮಾಡಿಸಿದ್ದಳು.

ಸುಪಾರಿ ನೀಡಿದ ಬಳಿಕ ವಿದ್ಯಾ, ಈಕೆಯ ಪ್ರಿಯಕರ ಆತನ ಸ್ನೇಹಿತ ರಘು ಸೇರಿ ಮುನಿರಾಜು ಅವರನ್ನು ಸಂಚು ರೂಪಿಸಿ ಬಾಡಿಗೆಗೆ ಬರುವಂತೆ ಮುನಿರಾಜು ಅವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ಹಿಂಬದಿಯಿಂದ ವೈರ್ ಬಿಗಿದು ಕೊಲೆ ಮಾಡಿ ಬಳಿಕ ಆಲೂರಿನ ಮಣಿಗನಹಳ್ಳಿ ಗ್ರಾಮದ ಹತ್ತಿರ ಮಣಿಗನಹಳ್ಳಿಯ ಹೇಮಾವತಿ ಹಿನ್ನೀರಿಗೆ ಎಸೆದಿದ್ದಾರೆ. ಪ್ರಕರಣದ ದಾರಿ ತಪ್ಪಿಸಲು ವಿದ್ಯಾ ಹಿರೀಸಾವೆ ಠಾಣೆಯಲ್ಲಿ ತಂದೆ ಮುನಿರಾಜು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಳು.

ಶವ ಪತ್ತೆಯಾಗಿ ಮೃತದೇಹದ ಗುರುತು ಪತ್ತೆ ಹಚ್ಚಿದ ಬಳಿಕ ಮುನಿರಾಜುವನ್ನು ಬಾಡಿಗೆಗೆ ಕರೆದುಕೊಂಡು ಬಂದಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಮಗಳ ವಿಚಾರ ಬಾಯಿಬಿಡಿಸಿದ್ದಾರೆ. ಈ ಪ್ರಕರಣ ಪತ್ತೆಗೆ ಎಎಸ್ಪಿ ನಂದಿನಿ, ಮತ್ತು ಹೊಳೆನರಸೀಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಲಕ್ಷ್ಮೇಗೌಡ ಮತ್ತು ಶಶಿಧರ್ ಮಾರ್ಗದರ್ಶನದಲ್ಲಿ ಆಲೂರು ಪಿ.ಐ.ರೇವಣ್ಣ ,ಉಪ ನಿರೀಕ್ಷಕರಾದ ಟಿ.ಪಿ. ಕುಸುಮ ಹಾಗೂ ತಂಡ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲೆಯ ಬಗ್ಗೆ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News