×
Ad

ಆಂಧ್ರ, ಉತ್ತರಖಂಡದ ಉಪಸಭಾಧ್ಯಕ್ಷರಿಂದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

Update: 2019-08-31 23:33 IST

ಬೆಂಗಳೂರು, ಆ. 31: ಆಂಧ್ರ ಪ್ರದೇಶ ವಿಧಾನಸಭೆ ಉಪಸಭಾಧ್ಯಕ್ಷ ಕೋನಾ ರಘುಪತಿ ಹಾಗೂ ಉತ್ತರಾಖಂಡ ವಿಧಾನಸಭೆ ಸಭಾಧ್ಯಕ್ಷ ಪ್ರೇಮಚಂದ ಅಗರ್‌ವಾಲ್ ಶನಿವಾರ ಕರ್ನಾಟಕಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಶನಿವಾರ ವಿಧಾನಸೌಧದ ಮೊದಲ ಮಹಡಿಯಲ್ಲಿ ಸ್ಪೀಕರ್ ಕಾಗೇರಿ ಅವರ ಕೊಠಡಿಯಲ್ಲಿ ಆಂಧ್ರ ಮತ್ತು ಉತ್ತರಖಂಡ ಉಪಸಭಾಧ್ಯಕ್ಷರು ವಿಧಾನಸಭೆಯಲ್ಲಿನ ಅರ್ಜಿಗಳ ಸಮಿತಿ ಕಾರ್ಯನಿರ್ವಹಣೆ, ಇನ್ನಿತರ ವಿಚಾರಗಳಿಗೆ ಸಂಬಂಧಪಟ್ಟಂತೆ ಸುದೀರ್ಘವಾಗಿ ಚರ್ಚಿಸಿದರು.

ಅನಂತರ ವಿಧಾನಸಭೆ/ವಿಧಾನ ಪರಿಷತ್ತಿನ ಸಭಾಂಗಣಗಳನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉತ್ತರಾಖಂಡ ವಿಧಾನಸಭೆಯ ಸಭಾಧ್ಯಕ್ಷರು ಸಾರ್ವಜನಿಕ ಮಹತ್ವದ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಲು ಅನುಕೂಲ ಆಗುವಂತೆ ವಿಧಾನಸಭೆಯ ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸುವ ಕುರಿತು ಹಾಗೂ ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಿ ವಿಚಾರ ನಿಮಯ ಮಾಡಿಕೊಂಡರು.

ಉಭಯ ನಾಯಕರ ಭೇಟಿ ಸಂದರ್ಭದಲ್ಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸೇರಿ ಸಚಿವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News