ಮೆಟ್ರೋ ಕಾಮಗಾರಿಗೆ ವೇಗ ನೀಡಲು ಕ್ರಮ: ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

Update: 2019-08-31 18:19 GMT

ಬೆಂಗಳೂರು, ಆ. 31: ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ದೃಷ್ಟಿಯಿಂದ ‘ನಮ್ಮ ಮೆಟ್ರೋ’ವನ್ನು 250 ಕಿ.ಮೀ ವಿಸ್ತರಣೆ ಹಾಗೂ ಮೆಟ್ರೋ ಕಾಮಗಾರಿ ವೇಗ ಹೆಚ್ಚಿಸಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ಆಗಬೇಕಿದೆ. ಜತೆಗೆ ಸಬ್‌ಅರ್ಬನ್ ರೈಲು ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು.

ಎಲೆಕ್ಟ್ರಿಕ್ ಬಸ್ ಖರೀದಿ: ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ 10 ಸಾವಿರ ಎಲೆಕ್ಟ್ರೀಕಲ್ ವಾಹನಗಳನ್ನು ಖರೀದಿಸುವಂತೆ ಸಲಹೆಗಳಿದ್ದು, ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದ ಅವರು, ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಶೀಘ್ರವೇ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲೆ ಈ ಸಭೆ ನಡೆಯಬೇಕಿತ್ತು. ಆದರೆ, ಅವರು ನೆರೆ ಪೀಡಿತ ಪ್ರದೇಶಗಳ ಭೇಟಿಗೆ ತೆರಳಿದ ಕಾರಣಕ್ಕೆ ಸಭೆಗೆ ಅವರು ಬಂದಿಲ್ಲ. ಮೆಟ್ರೋ, ನಗರದ ರಸ್ತೆ, ಸಂಚಾರ ದಟ್ಟಣೆ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಬಹುತೇಕ ಹಳೆಯ ವಿಚಾರಗಳಿದ್ದರೂ, ಯೋಜನೆಗಳ ಕಾರ್ಯರೂಪಕ್ಕೆ ತರಲು ಕ್ರಮ ವಹಿಸಬೇಕಿದೆ. ಅಲ್ಲದೆ, ಕೆಲ ಯೋಜನೆಗಳ ಪುನರ್ ಪರಿಶೀಲಿಸಿ ಕ್ರಿಯಾ ಯೋಜನೆ ಸಿದ್ದಪಡಿಸಬೇಕಿದೆ. ಜತೆಗೆ ಆಡಳಿತ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳ ಅಗತ್ಯವಿದೆ ಎಂದು ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದರು.

ನಗರದ ಸಂಚಾರ ದಟ್ಟಣೆಗೆ ಕಡಿವಾಣ, ರಸ್ತೆ, ಸೇರಿದಂತೆ ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಡಾ.ಅಶ್ವಥ್ ನಾರಾಯಣ, ನಗರದ ಪರಿಸರ ಮಾಲಿನ್ಯ ತಡೆಗೆ ಆದ್ಯತೆಯ ಮೇಲೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News