ನಿವೃತ್ತಿಯ ಕೊನೆಯ ದಿನ ಹೆಲಿಕಾಪ್ಟರ್ ನಲ್ಲಿ ಮನೆಗೆ ತೆರಳಿದ ಶಿಕ್ಷಕ!

Update: 2019-09-01 08:44 GMT
Photo: www.ndtv.com

ಜೈಪುರ, ಸೆ.1: ಹೆಲಿಕಾಪ್ಟರ್ ಬಾಡಿಗೆಗೆ ಪಡೆಯಬೇಕಾದರೆ ಎಷ್ಟು ವೆಚ್ಚವಾಗುತ್ತದೆ ಎಂದು ಈ ಮಹಿಳೆ ತನ್ನ ಶಿಕ್ಷಕ ಪತಿಯನ್ನು ಒಮ್ಮೆ ಕೇಳಿದ್ದರು. ವೃತ್ತಿಜೀವನದ ಕೊನೆಯ ದಿನ ರಮೇಶ್‍ ಚಂದ್ರ ಮೀನಾ, ಶಾಲೆಯಿಂದ ಮನೆಗೆ ತೆರಳಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ತಮ್ಮ ಪತ್ನಿಯ ಆಸೆ ಈಡೇರಿಸಿಯೇಬಿಟ್ಟರು!

ಈ ಘಟನೆ ನಡೆದದ್ದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ. ಸಾಂಪ್ರದಾಯಿಕ ಉಡುಗೆ ಹಾಗೂ ತಂಪು ಕನ್ನಡಕ ತೊಟ್ಟ ಮೀನಾ ತಮ್ಮ ಪತ್ನಿ ಹಾಗೂ ಮೊಮ್ಮಗನ ಜತೆಗೆ ಶಾಲೆಯ ಸಮೀಪದ ಹೆಲಿಪ್ಯಾಡ್‍ ನಲ್ಲಿ ಹೆಲಿಕಾಪ್ಟರ್ ಏರಿ ಜೈಪುರದಿಂದ 150 ಕಿಲೋಮೀಟರ್ ದೂರದ ತಮ್ಮ ಮಳವಳಿ ಗ್ರಾಮಕ್ಕೆ ತೆರಳಿದರು.

ಪತ್ನಿಯ ಆಸೆ ಈಡೇರಿಸುವ ಸಲುವಾಗಿ ದೆಹಲಿಯಿಂದ ಹೆಲಿಕಾಪ್ಟರ್ ಬಾಡಿಗೆಗೆ ಪಡೆದ ಮೀನಾ ಇದಕ್ಕಾಗಿ 3.7 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ರಮೇಶ್ ಹಾಗೂ ಪತ್ನಿ ಕೇವಲ 18 ನಿಮಿಷ ಮಾತ್ರ ಆಗಸದಲ್ಲಿ ಹಾರಿದರು. ಆದರೆ ಇದು ಸ್ಮರಣೀಯ ಅನುಭವ ಎಂದು ಅವರು ಹೇಳುತ್ತಾರೆ.

"ನಾವು ಛಾವಣಿ ಮೇಲೆ ಕುಳಿತಿದ್ದಾಗ ಪತ್ನಿ ಹೆಲಿಕಾಪ್ಟರ್ ನೋಡಿದ್ದಳು. ಅದನ್ನು ಬಾಡಿಗೆಗೆ ಪಡೆಯುವುದಾದರೆ ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿದ್ದಳು. ಆದ್ದರಿಂದ ನನ್ನ ನಿವೃತ್ತಿಯ ದಿನ ಆ ಆಸೆ ಈಡೇರಿಸುವ ಸಲುವಾಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದೆ. ಇದು ಮೊದಲ ಅನುಭವ. ನಾವದನ್ನು ಆಸ್ವಾದಿಸಿದೆವು" ಎಂದು ಮೀನಾ ವಿವರಿಸಿದರು.

ಜಿಲ್ಲಾಧಿಕಾರಿ ಹಾಗೂ ಇತರ ಇಲಾಖೆಗಳಿಂದ ಎಲ್ಲ ಅನುಮತಿ ಪಡೆದುಕೊಂಡಿದ್ದು, ಜಿಲ್ಲಾಡಳಿತ ಈ ಪ್ರಕ್ರಿಯೆಯನ್ನು ಸುಗಮಗೊಳಿಸಿತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News