ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭ : ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಅನುರಾಧ

Update: 2019-09-01 12:05 GMT

ಶಿವಮೊಗ್ಗ, ಸೆ. 1: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಸೆಪ್ಟಂಬರ್ ಒಂದರಿಂದ 30ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬಿಎಲ್‍ಒಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಕಾರ್ಯ ಕೈಗೊಳ್ಳುವರು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ತಿಳಿಸಿದರು.

ರವಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಚಾರ ಪೋಸ್ಟರ್ ಬಿಡುಗಡೆಗೊಳಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅರು ಮಾತನಾಡಿದರು.

ಬಿಎಲ್‍ಒಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರು ನೀಡುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಪರಿಶೀಲಿಸುವರು. ಇದಕ್ಕಾಗಿ ವಿಶೇಷ ಆಪ್ ಸಿದ್ಧಪಡಿಸಲಾಗಿದ್ದು, ಇದರ ಮೂಲಕ ಜಿಪಿಎಸ್ ಆಧಾರಿತ ಮಾಹಿತಿಯನ್ನು ದಾಖಲಿಸಲಾಗುವುದು. 

ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೊಂದಾಯಿಸಲು ಅರ್ಜಿ ನಮೂನೆ-06, ಬೇರೆ ಕಡೆ ಹೋಗಿರುವ ಮತದಾರರ ಹೆಸರು ತೆಗೆದು ಹಾಕಲು ನಮೂನೆ-07, ತಿದ್ದುಪಡಿಗಾಗಿ ನಮೂನೆ 08 ರಲ್ಲಿ ಮಾಹಿತಿ ಪಡೆಯುವರು. ಮನೆಯ ಎಲ್ಲಾ ಸದಸ್ಯರ ಹೆಸರು ಒಂದೇ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವಂತೆ ಖಾತ್ರಿಪಡಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ರಚಿಸಬಹುದಾದ ಮತಗಟ್ಟೆಗಳ ಕುರಿತು ಸರ್ಕಾರಿ ಕಟ್ಟಡಗಳ ಮಾಹಿತಿ ಸಂಗ್ರಹಿಸಲಾಗುವುದು. ಒಂದು ಜನವರಿ 2020 ಕ್ಕೆ ಅನ್ವಯವಾಗುವಂತೆ ಒಂದು ಜನವರಿ 2002 ರ ಪೂರ್ವದಲ್ಲಿ ಜನಿಸಿದವರ ಮಾಹಿತಿಯನ್ನು ಸಂಗ್ರಹಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಕ್ರಮ ವಹಿಸಲಾಗುವುದು ಎಂದರು.

ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಎನ್‍ವಿಎಸ್ ಪೋರ್ಟಲ್‍ನಲ್ಲಿ ಸಹ ಪರಿಶೀಲಿಸಬಹುದಾಗಿದೆ. ಅಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಜಿಲ್ಲೆಯಲ್ಲಿರುವ 364 ಸಾಮಾನ್ಯ ಸೇವಾ ಕೇಂದ್ರಗಳು, ಶಿವಮೊಗ್ಗ ಒನ್ ಕೇಂದ್ರ, ಎಸಿ ಮತ್ತು ತಹಶೀಲ್ದಾರ್ ಕಚೇರಿಗೆ ದಾಖಲೆಗಳೊಂದಿಗೆ ಭೇಟಿ ನೀಡಬಹುದಾಗಿದೆ. ಉಚಿತ ದೂರವಾಣಿ ಸಂಖ್ಯೆ 1950 ಗೆ ಕರೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಹಕರಿಸಲು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಮತಗಟ್ಟೆ ಸಹಾಯಕರನ್ನು ನೇಮಕ ಮಾಡುವಂತೆ ಅವರು ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. 
ಜಿಲ್ಲೆಯಲ್ಲಿ  ಪ್ರಸ್ತುತ 1775 ಮತಗಟ್ಟೆಗಳಿದ್ದು ಒಟ್ಟು 14,24,985 ಮತದಾರರು ಇದ್ದಾರೆ. ಇವರಲ್ಲಿ 710456 ಪುರುಷ ಮತದಾರರು ಹಾಗೂ 714529 ಮಹಿಳಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News