ಮೂಡಿಗೆರೆ: ಬದುಕಿದ್ದ ಮಗುವನ್ನು ಮೃತಪಟ್ಟಿದೆ ಎಂದ ವೈದ್ಯರು!; ಅಂತ್ಯಸಂಸ್ಕಾರಕ್ಕೆ ಸಾಗಿಸುವಾಗ ಅತ್ತ ಶಿಶು
ಚಿಕ್ಕಮಗಳೂರು, ಸೆ.1: ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮೂರು ದಿನಗಳ ನಂತರ ಬದುಕಿದ್ದ ಮಗು "ಮೃತಪಟ್ಟಿದೆ" ಎಂದು ಪೋಷಕರಿಗೆ ತಿಳಿಸಿ ಆಸ್ಪತ್ರೆಯಿಂದ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೂಡಿಗೆರೆ ಸಮೀಪದ ಆಲ್ದೂರು ಹೋಬಳಿಯ ಹಳಿಯೂರು ಗ್ರಾಮದ ಲೋಕೇಶ್ ಹಾಗೂ ಸರಿತಾ ದಂಪತಿಯ ಮೂರು ತಿಂಗಳ ಮಗು ಮೂರು ದಿನಗಳ ಹಿಂದೆ ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾಗಿತ್ತು. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ದಂಪತಿ ಮಗುವನ್ನು ಕಳೆದ ಶುಕ್ರವಾರ ಸ್ಥಳೀಯ ಆಸ್ಪತ್ರೆಗಳಿಗೆ ತೋರಿಸಿ ಅವರ ಶಿಫಾರಸಿನಂತೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ದು ಅಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಮಗುವಿಗೆ ಜಾಂಡಿಸ್ ಇದೆ ಎಂದು ಹೇಳಿ ಎರಡು ದಿನಗಳ ಕಾಲ ಮಗುವನ್ನು ಐಸಿಯುನಲ್ಲಿರಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನ ಕಳೆದ ಬಳಿಕ ರವಿವಾರ ಮಧ್ಯಾಹ್ನದ ವೇಳೆ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆಂದು ಆರೋಪಿಸಲಾಗಿದೆ.
ಮಗು ನಿತ್ರಾಣಗೊಂಡು ಮೌನವಾಗಿದ್ದುದನ್ನು ಮಗು ಮೃತಪಟ್ಟಿದೆ ಎಂದೇ ತಿಳಿದ ಪೋಷಕರು ಆಸ್ಪತ್ರೆಯ ಬಿಲ್ 10 ಸಾವಿರ ರೂ. ಪಾವತಿಸಿ ಆಂಬುಲೆನ್ಸ್ ನಲ್ಲಿ ಮಗುವಿನ ಅಂತ್ಯಸಂಸ್ಕಾರ ಮಾಡಲು ಮೂಡಿಗೆರೆ ಮಾರ್ಗವಾಗಿ ಹಳಿಯೂರಿಗೆ ಕರೆ ತರಲು ಮುಂದಾಗಿದ್ದಾರೆ. ರವಿವಾರ ಮಧ್ಯಾಹ ಮೂಡಿಗೆರೆ ಸಮೀಪದಲ್ಲಿ ಆಂಬುಲೆನ್ಸ್ ಬುರುತ್ತಿದ್ದ ವೇಳೆ ಮಗು ಇದ್ದಕ್ಕಿದ್ದಂತೆ ಅಳಲಾರಂಭಿಸಿದೆ. ದುಃಖದ ಮಡುವಿನಲ್ಲಿದ್ದ ಮಗುವಿನ ಪೋಷಕರು ಇದರಿಂದ ಆಶ್ಚರ್ಯಗೊಂಡಿದ್ದಾರೆ. ಮೃತಪಟ್ಟಿದೆ ಎಂದು ಹೇಳಿದ್ದ ವೈದ್ಯರ ಮಾತು ನಂಬಿ ಮಗುವಿನ ಅಂತ್ಯಸಂಸ್ಕಾರ ಮಾಡಲು ತರುತ್ತಿದ್ದ ಪೋಷಕರು ದಿಕ್ಕು ಕಾಣದೇ ಕೂಡಲೇ ಇನ್ನೊಂದು ಆಸ್ಪತ್ರೆಗೆ ಮಗುವನ್ನು ತಂದು ಅಲ್ಲಿನ ವೈದ್ಯರಿಗೆ ತೋರಿಸಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು ಮಗು ಆರೋಗ್ಯವಿದೆ. ಚಿಕಿತ್ಸೆಯ ಅಗತ್ಯವಿದ್ದು, ಬೇರೆಡೆ ತೋರಿಸಿ ಎಂದಿದ್ದಾರೆಂದು ತಿಳಿದು ಬಂದಿದೆ.
ಮಗು ಬದುಕಿರುವುದನ್ನು ಖಚಿತಪಡಿಸಿಕೊಂಡ ಪೋಷಕರು ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ದಿದ್ದಾರೆಂದು ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಮೂಡಿಗೆರೆ, ಆಲ್ದೂರು ಭಾಗದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.