ಚಿಕ್ಕಮಗಳೂರು: ದಂಪತಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Update: 2019-09-01 20:27 IST
ಚಿಕ್ಕಮಗಳೂರು, ಆ.31: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಮಹಿಳೆ ಹಾಗೂ ಆಕೆಯ ಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ನರಸಿಂಹರಾಜಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದಿತ ಆರೋಪಿಯನ್ನು ನರಸಿಂಹರಾಜಪುರ ತಾಲೂಕಿನ ಸಾತ್ಕೊಳಿ ಗ್ರಾಮದ ನಿವಾಸಿ ಗೋವಿಂದ ಎಂದು ಗುರುತಿಸಲಾಗಿದ್ದು, ಆರೋಪಿ ಗೋವಿಂದ ಶುಕ್ರವಾರ ಮಧ್ಯರಾತ್ರಿ ಸಾತ್ಕೊಳಿ ಗ್ರಾಮದ ಭಾರತಿ ಹಾಗೂ ಆಕೆಯ ಪತಿ ಧರ್ಮಯ್ಯ ಎಂಬವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.
ಹತ್ಯೆ ಬಳಿಕ ಆರೋಪಿ ಗ್ರಾಮ ತೊರೆದು ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡ ನರಸಿಂಹರಾಜಪುರ ಠಾಣೆಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ನರಸಿಂಹರಾಜಪುರ ಪಟ್ಟಣ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಗೋವಿಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆಂದು ತಿಳಿದು ಬಂದಿದೆ.