ರಾಜ್ಯ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-09-01 15:27 GMT

ಮೈಸೂರು,ಸೆ.1: ಮುಖ್ಯಮಂತ್ರಿ ಬಿ.ಎಸ್.ವೈ ನೇತೃತ್ವದ ಬಿಜೆಪಿ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ, ಹಾಲು ಕುಡಿದ ಮಕ್ಕಳೇ ಬದುಕೋದು ಕಷ್ಟ ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ, ವರುಣಾ, ನಂಜನಗೂಡು ಮತ್ತು ಎಚ್.ಡಿ.ಕೋಟೆಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ರಚನೆಯಾಗಿ ಇಷ್ಟುದಿನ ಕಳೆದಿದ್ದರೂ ಟೇಕ್ ಆಫ್ ಆಗಿಲ್ಲ, ಸಚಿವ ಸ್ಥಾನಕ್ಕಾಗಿ ಅವರಲ್ಲೆ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದಾರೆ. ಸರಕಾರದಲ್ಲಿ ಸರಿಯಾಗಿ ಯಾವ ಕೆಲಸಗಳೂ ಆಗುತ್ತಿಲ್ಲ ಎಂದು ಹರಿಹಾಯ್ದರು.
 
ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ಗೊತ್ತಾಗುತ್ತಿಲ್ಲ, ನಾನೇ ಟಿಕೆಟ್ ಕೊಟ್ಟವರು ಶಾಸಕರಾದರು. ನಂತರ ನನ್ನ ವಿರುದ್ಧನೇ ನಿಲ್ಲುತ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೋ ಪದಕ್ಕೆ ಅರ್ಥ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
 
ರಾಜಕೀಯದಲ್ಲಿ ಇದು ನಿತ್ಯನಿರಂತರವಾಗಿ ನಡೆಯುತ್ತಿದೆ. ಏನೇ ಆದರೂ ಅಂತಿಮವಾಗಿ ಜನರು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ಈಡಿ ತನಿಕೆ ನಡೆಸುತ್ತಿರುವುದರ ಕುರಿತು ಪ್ರಸ್ತಾಪಿಸಿದ ಅವರು, ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾನೂನು ಅಂದರೆ ಎಲ್ಲರಿಗೂ ಒಂದೆ ಅಲ್ವ ಎಂದ ಅವರು, ಸದನದಲ್ಲಿ ಆಪರೇಷನ್ ಕಮಲದ ಬಗ್ಗೆ ಶಾಸಕರುಗಳೇ ಪ್ರಸ್ತಾಪ ಮಾಡಿದರೂ ಅವರ ವಿರುದ್ದ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಮುಗಿಸಲು ಈಡಿ ಬಳಸಿಕೊಳ್ಳಲಾಗುತ್ತಿದೆ. ತನಗೆ 5 ಕೋಟಿ.ರೂ ಕೊಡಲು ಬಂದಿದ್ದರು ಎಂದು ಶಾಸಕ ಶ್ರೀನಿವಾಸಗೌಡ ಸದನದಲ್ಲೇ ಬಹಿರಂಗಪಡಿಸಿದರು. ವಿಶ್ವನಾಥ್, ಅಶ್ವಥ್ ನಾರಾಯಣ್, ಯೋಗೇಶ್ವರ್ ಬಗ್ಗೆ ಗಂಭೀರ ಆರೋಪ ಮಾಡಿದರು. ಇದರ ಬಗ್ಗೆ ಬಿಜೆಪಿ ಯಾಕೆ ತನಿಕೆ ಮಾಡುತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರನ್ನೇ ಸೆಲೆಕ್ಟ್ ಮಾಡಿ ತನಿಖೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕಿರುಕುಳ ಕೊಟ್ಟು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದು ಸಾರಿ ನಾನು ಹೃದಯದಲ್ಲಿ ಇದ್ದೀನಿ ಅಂತಾನೆ. ಆಮೇಲೆ ನನ್ನನ್ನೆ ಟೀಕೆ ಮಾಡುತ್ತಾನೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದರು. ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ ಎಂದು ಎಂಟಿಬಿ ನಾಗರಾಜ್ ಟೀಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ಅನುಯಾಯಿ ಮಾಜಿ ಉಪಮೇಯರ್ ಎನ್.ಲಕ್ಷ್ಮಣ್ ಅವರು ಅನರೋಗ್ಯದಿಂದ ಇಂದು ನಿಧನರಾಗಿದ್ದರು. ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್, ಕೆ.ಮರೀಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News