ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಮತದಾರರ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ

Update: 2019-09-01 17:53 GMT

ದಾವಣಗೆರೆ: ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ರವಿವಾರ ಚಾಲನೆ ನೀಡಿದರು. 

ತಮ್ಮ ಗೃಹ ಕಛೇರಿ ಶಿವಪಾರ್ವತಿಯಲ್ಲಿ ಮತದಾರರ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ಕಾರ್ಯಕ್ರಮ ಇಂದಿನಿಂದ ಸೆಪ್ಟಂಬರ್ 30ರವರೆಗೆ ನಡೆಯಲಿದ್ದು, ಮತದಾರರು ತಮ್ಮ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ, ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದರು. 

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಎಲ್‍ಓಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಇವರೊಂದಿಗೆ ನಮ್ಮ ಕಾರ್ಯಕರ್ತರು ಸಹ ಕೈಜೋಡಿಸಿ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವರು. ನಾಗರೀಕರು ಸಹ ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಕರೆ ನೀಡಿದರು. 

ಮತದಾನ ಒಂದು ಪವಿತ್ರ ಹಕ್ಕಾಗಿದ್ದು, ಅದನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕೂಡಾ ಅಷ್ಟೇ ಮುಖ್ಯ. ಎಷ್ಟೋ ಬಾರಿ ಉತ್ಸಾಹದಿಂದ ಮತಗಟ್ಟೆಗೆ ಮತ ಚಲಾಯಿಸಲು ಹೋದಾಗ ಮತದಾರರ ಪಟ್ಟಿಯಲ್ಲಿ ಹೆಸರೇ ಮಾಯವಾಗಿರುತ್ತದೆ. ಆಗ ನಿರಾಶೆಯಿಂದ ಮನೆಗೆ ವಾಪಸ್ ಆಗಬೇಕಾಗಿರುತ್ತದೆ. ಹೀಗಾಗಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿ ಕೊಡದಂತೆ ಈ ಮೋದಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಯಸ್ಸು, ಭಾವಚಿತ್ರ, ಸಮರ್ಪಕವಾಗಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕೆಂದರು. 

ಪಾಲಿಕೆ ಉಪ ಆಯುಕ್ತರಾದ ರವೀಂದ್ರ ಮಲ್ಲಾಪುರ ಮಾತನಾಡಿ, ಮತದಾರರು ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಮ್ಮ ವೈಯಕ್ತಿಕ ಜವಾಬ್ದಾರಿಯಿಂದ ಪ್ರತಿ ಗ್ರಾ.ಪಂ ಗಳಲ್ಲಿ ಬಾಪೂಜಿ ಸೇವಾ ಕೇಂದ್ರ, ಅಟಲ್‍ಜೀ ಜನಸ್ನೇಹಿ ಕೆಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದರು.  

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಪದ್ಮ ಬಸವಂತಪ್ಪ, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಕೆ.ನಾಗರಾಜ್,  ಪರಿಷತ್ ಕಾರ್ಯದರ್ಶಿ ಗದಿಗೇಶ್ ಶಿರ್ಶಿ, ಶಿರಸ್ತೆದಾರರಾದ ರಾಜೇಶ್, ಮಹಾನಗರ ಪಾಲಿಕೆ ಚುನಾವಣಾ ಶಾಖೆಯ ಎಂ.ಬಿ.ಲಿಂಗರಾಜ್, ತಹಶೀಲ್ದಾರ್ ಚುನಾವಣಾ ಶಾಖೆಯ ನಾಗಲಿಂಗೇಶ್, ಬಿಎಲ್‍ಓ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News