ಸಿಎನ್‍ಸಿಯಿಂದ ‘ಕೈಲ್ ಮುಹೂರ್ತ’ ಆಚರಣೆ : ಕೋವಿ ಹಕ್ಕಿನ ಪರ ನಿರ್ಣಯ

Update: 2019-09-01 18:05 GMT

ಮಡಿಕೇರಿ, ಸೆ.1: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಆಶ್ರಯದಲ್ಲಿ 25ನೇ ವರ್ಷದ ಕೊಡವರ ಆಯುಧ ಪೂಜೆ ‘ಕೈಲ್ ಮುಹೂರ್ತವನ್ನು’ ಸಾರ್ವತ್ರಿಕವಾಗಿ ಆಚರಿಸಲಾಯಿತು.

ನಗರದ ಜೂನಿಯರ್ ಕಾಲೇಜು ಬಳಿಯ ಮಂದ್‍ನಲ್ಲಿ  ಕೊಡವರ ಧಾರ್ಮಿಕ ಹಾಗೂ ಸಾಂಸೃತಿಕ ಲಾಂಛನವಾದ ಬಂದೂಕು, ಒಡಿಕತ್ತಿ- ಪೀಚೆ ಕತ್ತಿ ಮತ್ತು ಕೃಷಿ ಉಪಕರಣಗಳಾದ ನೊಗ - ನೇಗಿಲು ಮತ್ತಿತರ ಸಲಕರಣೆಗೆ   ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಗುರುಕಾರೋಣರಿಗೆ ನೈವೇದ್ಯ ಅರ್ಪಿಸಲಾಯಿತು. ಬಳಿಕ ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ವಾಹನ ಮೆರವಣಿಗೆಯೊಂದಿಗೆ ಕಡಗದಾಳುವಿನಲ್ಲಿರುವ ಕ್ಯಾಪಿಟಲ್ ವಿಲೇಜ್‍ಗೆ ತೆರಳಿದ ಸಿಎನ್‍ಸಿ ಪ್ರಮುಖರು ಹಬ್ಬದ ಸಾಂಪ್ರದಾಯಿಕ ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಕೈಲ್ ಮುಹೂರ್ತವನ್ನು ಆಚರಿಸಿದರು. 

ಇದೇ ಸಂದರ್ಭ ಸಂಘಟನೆಯ 13 ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವಂತೆ ಸರಕಾರದ ಗಮನ ಸೆಳೆಯುವ ನಿರ್ಣಯ ಕೈಗೊಳ್ಳಲಾಯಿತು. ಕೊಡವರ ಕೋವಿ ಹಕ್ಕನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡಗು ಕರ್ನಾಟಕ ರಾಜ್ಯದೊಂದಿಗೆ ಸೇರ್ಪಡೆಗೊಂಡ ಬಳಿಕ ಕೊಡವರ ಎಲ್ಲಾ ಹಬ್ಬ ಹರಿದಿನಗಳು ಕಣ್ಮರೆಯಾಗುತ್ತಾ ವಿಶಿಷ್ಟ ಪರಂಪರೆಯ ಹೆಗ್ಗುರುತು ನಿಧಾನವಾಗಿ ಜನಮಾನಸದಿಂದ ಹಾಗೂ  ಸರ್ಕಾರಿ ದಾಖಲೆಗಳಿಂದ ಅಳಿಸಿ ಹೋಗುತ್ತಿದೆ ಎಂದು ವಿಷಾದಿಸಿದರು.

ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಲು ಸರಕಾರ ಕನಿಷ್ಟ ಆ.31ರಿಂದ ಸೆ.4ರವರೆಗೆ ಕಡ್ಡಾಯವಾಗಿ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೊಡವ ಬುಡಕಟ್ಟು ಕುಲಕ್ಕೂ ಭೂತಾಯಿಗೂ ಹಾಗೂ ಬಂದೂಕಿಗೂ ಅವಿನಾಭಾವ ಸಂಬಂಧವಿದ್ದು, ಶಸ್ತ್ರಾಸ್ತ್ರವೂ ಆದಿಮಸಂಜಾತ ಕೊಡವ ಬುಡಕಟ್ಟು ಕುಲದ ಜನಪದೀಯ ನಿಧಿಯಾಗಿದೆ. ಇದು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಬಂದೂಕು ಕೊಡವ ಸಂಸ್ಕೃತಿಯ ಲಾಂಛನ ಮತ್ತು ಧಾರ್ಮಿಕ ಹೆಗ್ಗುರುತಾಗಿದೆ. ಕೊಡವರ ಈ ವಿಶೇಷ ಹಕ್ಕನ್ನು ಸಂರಕ್ಷಿಸುವುದು ಭಾರತ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ಮಹತ್ವದ ಜವಾಬ್ದಾರಿಯಾಗಿದ್ದು ರಾಷ್ಟ್ರದ ಬಹು ಸಂಖ್ಯಾತ ಜನರ ಹೊಣೆಗಾರಿಕೆಯೂ ಕೂಡ ಆಗಿದೆ ಎಂದು ಪ್ರತಿಪಾದಿಸಿದರು.   

ಕೊಡವರು ಪ್ರಖರ ರಾಷ್ಟ್ರೀಯವಾದಿಗಳು ಮತ್ತು ಅಪ್ರತಿಮ ರಾಷ್ಟ್ರಪ್ರೇಮಿಗಳೂ ಆಗಿದ್ದು, ಅವರಿಗೆ ಇರುವ ಬಂದೂಕು ಹೊಂದುವ ವಿಶೇಷ ರಿಯಾಯಿತಿಯನ್ನು ಎಂದೂ ದುರುಪಯೋಗಪಡಿಸಿಕೊಂಡಿಲ್ಲ. ಆದರೂ ಕೊಡವರ ಈ ಪಾರಂಪರಿಕ ಹಕ್ಕನ್ನು ಕಸಿದುಕೊಳ್ಳಲು ‘ತುಕಡೆ ಗ್ಯಾಂಗ್’ ಒಂದು ಕಾರ್ಯಪ್ರವೃತ್ತವಾಗಿದೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.  

ಕೊಡವರ ಕೋವಿ ಹಕ್ಕನ್ನು ಮೊಟಕುಗೊಳಿಸುವಂತೆ ಸಲ್ಲಿಸಿರುವ ರಿಟ್ ತಕರಾರು ಅರ್ಜಿ ಪೂರ್ವಾಗ್ರಹ ಪೀಡಿತ ಎಂದೂ ಅವರು ಟೀಕಿಸಿದರು. 
ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ನಂದಿನೆರವಂಡ ನಿಶಾ ಅಚ್ಚಯ್ಯ ಪ್ರಾರ್ಥಿಸಿದರು. 

ಜಿಲ್ಲಾಡಳಿತಕ್ಕೆ ಮನವಿ
ಇದಕ್ಕೂ ಮೊದಲು ಮಡಿಕೇರಿಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಸಿಎನ್‍ಸಿ ಪ್ರಮುಖರು ಯಾವುದೇ ವಿಳಂಬ ಸೂತ್ರವನ್ನು ಅನುಸರಿಸದೆ ಕೋವಿ ಹಕ್ಕಿನ ವಿನಾಯಿತಿ ಪತ್ರವನ್ನು ತುರ್ತಾಗಿ ನೀಡಬೇಕೆಂದು ಕೋರಿದರು.

ಜಿಲ್ಲಾಡಳಿತದ ಪ್ರತಿನಿಧಿ ಜ್ಞಾಪನಾ ಪತ್ರವನ್ನು ಸ್ವೀಕರಿಸಿದರು. ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಂಡಿಸಿದ ನಿರ್ಣಯಕ್ಕೆ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚ್ಚೆಟ್ಟೋಳಂಡ ಮನು ಮುತ್ತಪ್ಪ ಹಾಗೂ ನೆಲಜಿ ಕೊಡವ ಸಮಾಜದ ಅಧ್ಯಕ್ಷ ಮಂಡೀರ ನಂದ ಅನುಮೋದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News