ವಿರಾಜಪೇಟೆಯಿಂದ ಕೂಟುಪೊಳೆಗೆ ಮಿನಿ ಬಸ್‍ಗಳ ಸಂಚಾರ ಆರಂಭ

Update: 2019-09-01 18:07 GMT

ಮಡಿಕೇರಿ,ಸೆ.1 :ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಹಾಮಳೆಯಿಂದ ಹಾನಿಗೀಡಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಕಾರಣದಿಂದ  ಪ್ರಯಾಣಿಕರ ಅನುಕೂಲಕ್ಕಾಗಿ ವಿರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಪೊಳೆವರೆಗೆ ಸಂಚರಿಸಲು ಕೆಎಸ್‍ಆರ್‍ಟಿಸಿ ಮಿನಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ವಿರಾಜಪೇಟೆ ಬಸ್ ನಿಲ್ದಾಣದಲ್ಲಿ  ಶಾಸಕ ಕೆ.ಜಿ.ಬೋಪಯ್ಯ ಅವರು ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿ ಕೇರಳ ಗಡಿ ಕೂತುಪೊಳೆವರೆಗೆ ಪ್ರಯಾಣ ಬೆಳೆಸಿದರು.

ಮಿನಿ ಬಸ್‍ಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿರಾಜಪೇಟೆ ಬಸ್ ನಿಲ್ದಾಣದಿಂದ ಕೂಟುಪೊಳೆವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿವೆ.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ರಸ್ತೆ ಹಾನಿಗೀಡಾದ ಕಾರಣ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಲಘು ವಾಹನದ ಸಂಚಾರಕ್ಕೆ ಮಾತ್ರ ಅನುಕೂಲ ಮಾಡಿ ಕೊಡಲಾಗಿತ್ತು. ಪ್ರಯಾಣಿಕರ ಒತ್ತಾಯದ ಹಿನ್ನೆಲೆ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಅವರು ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಆಗಮಿಸಿದ್ದಾಗ ಈ ಬಗ್ಗೆ ಗಮನ ಸೆಳೆದಿದ್ದರು.  

ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬೋಪಯ್ಯ ಮಾತನಾಡಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿರುವುದರಿಂದ ಅನಿವಾರ್ಯವಾಗಿ ಮಿನಿ ಬಸ್‍ಗಳ ಸಂಚಾರವನ್ನು ಆರಮಭಿಸಲಾಗಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ತಕ್ಷಣ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ ಎಂದರು.

ಕೂಟುಪೊಳೆ ಸೇತುವೆ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಆಕ್ಷೇಪವಿದೆ. ಈ ವಿವಾದವನ್ನು ಶೀಘ್ರ ಸರಿಪಡಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಎರಡೂ ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕೇರಳ ಗಡಿಯಲ್ಲಿ ಬಸ್‍ನ್ನು ಬರಮಾಡಿಕೊಂಡ ಸ್ಥಳೀಯ ಇರಟ್ಟಿ ಗ್ರಾ.ಪಂ. ಸದಸ್ಯ ಶ್ರೀಜ ಸಬಾಸ್ಟಿನ್ ಮಾತನಾಡಿ ಕರ್ನಾಟಕ ಸರಕಾರ ಹಾಗೂ ಶಾಸಕರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯ ಅಚ್ಚಪಂಡ ಮಹೇಶ್, ಮಲ್ಲಂಡ ಮಧು, ಜೋಕಿಂ, ಚುಪ್ಪ ನಾಗರಾಜ್, ಪ.ಪಂ ಸದಸ್ಯ ಸುಭಾಷ್, ಆಶಾ, ರಘುನಾಣಯ್ಯ, ಪ.ಪಂ ಮಾಜಿ ಅಧ್ಯಕ್ಷ, ಇ.ಸಿ.ಜೀವನ್ ಹಾಜರಿದ್ದರು.

ಬಸ್‍ಗಳು ಪ್ರತಿದಿನ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಗೆ ಸಂಚರಿಸಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News