×
Ad

ಪ್ರೀತಿಸಲು ನಿರಾಕರಿಸಿದ ಯುವತಿಗೆ ಚೂರಿಯಿಂದ ಇರಿದ ಯುವಕ

Update: 2019-09-03 17:00 IST

ಶಿವಮೊಗ್ಗ, ಸೆ. 3: ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನೆರೆ ಮನೆಯ ಯುವಕನೋರ್ವ ಚೂರಿಯಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕೆಂಚನಾಳಸರ ಗ್ರಾಮದಲ್ಲಿ ನಡೆದಿದೆ. 

ರಾಕೇಶ್ (22) ಆರೋಪಿತ ಯುವಕನಾಗಿದ್ದು, ಘಟನೆಯ ನಂತರ ತಲೆಮರೆಸಿಕೊಂಡಿದ್ದಾನೆ. ಯುವತಿಯ ಕೆನ್ನೆಗೆ ಚೂರಿ ಇರಿತದಿಂದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆ ಹಿನ್ನೆಲೆ: ಆರೋಪಿ ರಾಕೇಶ್ ನೆರೆಮನೆಯ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು ಸೆ.2 ರಂದು ಯುವತಿಯ ಮನೆಗೆ ಆಗಮಿಸಿದ್ದಾನೆ. 

ತನ್ನನ್ನು ಪ್ರೀತಿಸುವಂತೆ ಯುವತಿಗೆ ಮತ್ತೆ ಪೀಡಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಕೊಂಡಿಲ್ಲ. ಅಣ್ಣ, ತಂಗಿಯಂತೆ ಇರೋಣ. ಕೈಗೆ ರಾಕಿ ಕಟ್ಟು ಎಂದು ಆರೋಪಿ ತಿಳಿಸಿದ್ದಾನೆ. ಅದರಂತೆ ಯುವತಿಯು ರಾಕಿ ಕಟ್ಟಲು ಮುಂದಾದ ವೇಳೆ ಆರೋಪಿಯು ತನ್ನ ಬಳಿಯಿದ್ದ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಇರಿಯಲೆತ್ನಿಸಿದ್ದಾನೆ ಎನ್ನಲಾಗಿದೆ.

ಆದರೆ ಯುವತಿ ತಪ್ಪಿಸಿಕೊಂಡಿದ್ದು, ಬಲ ಕೆನ್ನೆಯ ಭಾಗದಲ್ಲಿ ಚೂರಿ ಇರಿತದಿಂದ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣವೇ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News