ಅತಿವೃಷ್ಟಿಗೆ ನಲುಗಿದ್ದ ಮಲೆನಾಡ ಜನರಿಗೆ ಮತ್ತೆ ಮಳೆಯ ಆತಂಕ

Update: 2019-09-03 12:57 GMT

ಚಿಕ್ಕಮಗಳೂರು, ಸೆ.3: ಕಳೆದ ಆಗಸ್ಟ್ ನಲ್ಲಿ ಭಾರೀ ಅನಾಹುತಗಳನ್ನು ಸೃಷ್ಟಿಸಿ ಮರೆಯಾಗಿದ್ದ ಮಳೆ ಇದೀಗ ಮಲೆನಾಡಿನಲ್ಲಿ ಭೋರ್ಗರೆಯಲಾರಂಭಿಸಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಗೌರಿ ಗಣೇಶ ಹಬ್ಬದ ಸಡಗರಕ್ಕೆ ನಿರಂತರ ಮಳೆ ಕೊಂಚ ಅಡ್ಡಗಾಲು ಹಾಕಿದ್ದು, ಮಲೆನಾಡು ಭಾಗದಲ್ಲಿ ಮಂಗಳವಾರ ಬೆಳಗ್ಗೆ ಹಾಗೂ ಸಾಯಂಕಾಲದ ವೇಳೆ ಧಾರಾಕಾರ ಮಳೆ ಸುರಿದಿದೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಈ ಭಾಗದ ಪ್ರಮುಖ ನದಿಗಳಾಗಿರುವ ತುಂಗ-ಭದ್ರಾ, ಹೇಮಾವತಿ, ಜಪಾವತಿ ನದಿಗಳು ಮತ್ತೆ ತುಂಬಿ ಹರಿಯಲಾರಂಭಿಸಿವೆ. ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಬ್ಬದ ಸಂಭ್ರದಲ್ಲಿರುವ ಜನರಿಗೆ ಧಾರಾಕಾರ ಮಳೆ ಇರಿಸುಮುರಿಸು ಉಂಟುಮಾಡಿದೆ.

ಮೂಡಿಗೆರೆ ತಾಲೂಕಿನಲ್ಲಿ ಸತತ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ತಾಲೂಕಿನ ಬಣಕಲ್, ಕೊಟ್ಟಿಗೆಹಾರ, ಕಳಸ, ಜಾವಳಿ, ಬಾಳೂರು, ಕುದುರೆಮುಖ, ಹೊರನಾಡು, ಬಾಳೆಹೊಳೆ ಮತ್ತಿತರ ಗ್ರಾಮಗಳಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಜನಜೀವನವೂ ಅಸ್ತವ್ಯಸ್ತಗೊಂಡಿದೆ. ತಾಲೂಕು ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಹಾಮಳೆಯಿಂದಾಗಿ ಭಾರೀ ಭೂಕುಸಿತ, ನದಿಗಳಲ್ಲಿ ಪ್ರವಾಹ ಉಂಟಾಗಿ ಸಾವು ನೋವು ಸಂಭವಿಸಿದ್ದು, ನೂರಾರು ಮನೆಗಳು, ನೂರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿತ್ತು. ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇನ್ನು ಮಳೆಯ ಆರ್ಭಟ ನಿಂತು ಎಲ್ಲವೂ ಸರಿಯಾಯಿತೆನ್ನುವಷ್ಟರಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಳೆ ಮತ್ಯಾವ ಅನಾಹುತ ಸೃಷ್ಟಿಸಲಿದೆಯೋ ಎಂಬ ಆತಂಕ ತಾಲೂಕಿನ ಜನರನ್ನು ಕಾಡುತ್ತಿದೆ.

ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನದಿ, ತೊರೆ, ಹಳ್ಳಕೊಳ್ಳಗಳ ನೆರೆ ನೀರಿಂದ ಕೊಚ್ಚಿ ಹೋದ ಜಮೀನು, ತೋಟ, ಹೊಲಗದ್ದೆಗಳನ್ನು ದುರಸ್ತಿ ಮಾಡುವ ಕೆಲಸಲ್ಲಿ ತಾಲೂಕಿನ ರೈತರು, ಕೃಷಿಕರು ನಿರತರಾಗಿದ್ದರು. ಆದರೆ ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವುದರಿಂದ ರೈತರು, ಕೃಷಿಕರ ದುರಸ್ತಿ ಚಟುವಟಿಕೆಗೂ ಮಳೆ ಅಡ್ಡಿ ಮಾಡುತ್ತಿದೆ. ತಾಲೂಕಿನಲ್ಲಿ ಬಹುತೇಕ ಭತ್ತದ ಗದ್ದೆಗಳ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಹಾನಿಗೊಳಗಾದ ಭತ್ತದ ಗದ್ದೆಗಳ ದುರಸ್ತಿ, ಮರುನಾಟಿಗೆ ಸದ್ಯ ಸುರಿಯುತ್ತಿರುವ ಮಳೆ ತಡೆಯೊಡ್ಡಿದೆ. 

ತಾಲೂಕು ವ್ಯಾಪ್ತಿಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಗೆ ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದ ಸುಮಾರು 1600ಕ್ಕೂ ಹೆಚ್ಚು ಸಂತ್ರಸ್ತರ ಪೈಕಿ ಬಹುತೇಕರು ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಹೀಗೆ ಹಿಂದಿರುಗಿರುವು ಸಂತ್ರಸ್ತರು ಹಾನಿಗೊಳಗಾದ ತಮ್ಮ ಮನೆಮಠ, ಜಮೀನುಗಳ ದುರಸ್ತಿಗೆ ಮುಂದಾಗಿದ್ದಾರೆ. ಈ ನಡುವೆ ಇದೀಗ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಂತ್ರಸ್ತ ಗ್ರಾಮಗಳ ಜನರು ಮತ್ತೆ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ ಒಂದೆರೆಡು ಕಡೆ ಭಾರೀ ಗಾತ್ರದ ಮರಗಳು ರಸ್ತೆಗುರುಳಿದ ಘಟನೆಗಳನ್ನು ಹೊರತು ಪಡಿಸಿ ಬೇರೆ ಅನಾಹುತಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯ ಜಯಪುರ, ಬಿ.ಜೆ.ಕಟ್ಟೆ, ಅಗಳಗಂಡಿ, ಹರಿಹರಪುರ ಗ್ರಾಮಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ, ನೆಮ್ಮಾರ್, ಬಿದರಗೋಡು, ಎಸ್‍ಕೆ ಬಾರ್ಡರ್ ಹಾಗೂ ಶೃಂಗೇರಿ ಪಟ್ಟಣದ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ ಭಾಗದಲ್ಲಿ ಮಳೆ ತೀವ್ರಗೊಂಡಿದೆ.

ಇನ್ನು ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹೋಬಳಿ ಹೊರತುಪಡಿಸಿ ಉಳಿದಂತೆ ಮಲೆನಾಡು ಭಾಗದ ಹೋಬಳಿಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತ ಕಳೆದ ಮೂರು ದಿನಗಳಿಂದಲೂ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದ್ದು ಉಳಿದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಗೌರಿ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಆದರೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಬ್ಬದ ಅಬ್ಬರಕ್ಕೆ ಬ್ರೇಕ್ ಹಾಕಿದ್ದು, ಧಾರಾಕಾರ ಮಳೆಯಿಂದಾಗಿ ವ್ಯಾಪಾರ ವಹಿವಾಟು ಕುಂಟಿತಗೊಂಡಿದೆ. ಸೋಮವಾರ ಹಾಗೂ ಮಂಗಳವಾರ ಮಲೆನಾಡು ಭಾಗದಪಟ್ಟಣಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News