ಕೊಡಗಿನಲ್ಲಿ ಮತ್ತೆ ಮಳೆ: ನದಿ, ಗುಡ್ಡ ಪ್ರದೇಶದ ಜನರಲ್ಲಿ ಆತಂಕ

Update: 2019-09-03 13:24 GMT

ಮಡಿಕೇರಿ, ಸೆ.3: ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಸಾವು, ನೋವುಗಳು ಸಂಭವಿಸಿ ಸಂಕಷ್ಟವನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಗೆ ಮತ್ತೆ ಮಳೆಯ ಆತಂಕ ಎದುರಾಗಿದೆ.

ಮಳೆ ಹೋಯಿತು ಎಂದು ಸುಧಾರಿಸಿಕೊಳ್ಳುವ ಹೊತ್ತಿನಲ್ಲೇ ಸೆಪ್ಟಂಬರ್ ತಿಂಗಳ ಆರಂಭದಲ್ಲೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಅತಿಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಸಾಧಾರಣ ಪ್ರಮಾಣದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

ಗುಡ್ಡ ಕುಸಿತದಿಂದ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ವಿರಾಜಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚೇ ಇದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಏಳನೇ ವಾರ್ಡ್‍ನ ತಡೆಗೋಡೆಯೊಂದು ಕುಸಿದು ಬಿದ್ದು, ಅಪಾಯದ ಪರಿಸ್ಥಿತಿ ಎದುರಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 

ಸೋಮವಾರಪೇಟೆ ತಾಲೂಕಿನಲ್ಲೂ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ಸಾಧಾರಣ ರೀತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಮಂಜು, ಮಳೆಯೊಂದಿಗೆ ಮೈಕೊರೆಯುವ ಚಳಿಯೂ ಇದೆ. 

ಜಿಲ್ಲೆಯ ನದಿ ಹಾಗೂ ಗುಡ್ಡ ಪ್ರದೇಶ ವ್ಯಾಪ್ತಿಯ ಜನರು ಮತ್ತೆ ಮಳೆಯಾಗುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದ ಬದುಕನ್ನೇ ಕಳೆದುಕೊಂಡ ಅನೇಕ ಕುಟುಂಬಗಳು ಇನ್ನೂ ಕೂಡ ಸಂಕಷ್ಟದಲ್ಲೇ ದಿನ ಕಳೆಯುತ್ತಿವೆ. 

ಮಳೆ ವಿವರ
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 17.30 ಮಿ.ಮೀ. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 92.6 ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 38.8 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 133.6 ಮಿ.ಮೀ.  

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 27.6, ನಾಪೋಕ್ಲು 7, ಸಂಪಾಜೆ 25.2, ಭಾಗಮಂಡಲ 32.8, ವಿರಾಜಪೇಟೆ ಕಸಬಾ 4.2, ಶ್ರೀಮಂಗಲ 15, ಪೊನ್ನಂಪೇಟೆ 10.6, ಅಮ್ಮತ್ತಿ 4, ಬಾಳೆಲೆ 4, ಹುದಿಕೇರಿ 1, ಸೋಮವಾರಪೇಟೆ ಕಸಬಾ 24.4, ಶನಿವಾರಸಂತೆ 23.2, ಶಾಂತಳ್ಳಿ 50, ಕೊಡ್ಲಿಪೇಟೆ 29.8, ಕುಶಾಲನಗರ 2.2, ಸುಂಟಿಕೊಪ್ಪ 4 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News