ಸಕಾಲ ಯೋಜನೆ ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಶಿಸ್ತು ಕ್ರಮ: ಸಚಿವ ಸುರೇಶ್ ಕುಮಾರ್

Update: 2019-09-03 14:04 GMT

ಬೆಂಗಳೂರು, ಸೆ.3: 2011ರಲ್ಲಿ ಅಂದಿನ ಬಿಜೆಪಿ ಸರಕಾರ ಸಕಾಲ ಯೋಜನೆ ಆರಂಭಿಸಿದಾಗ 151 ಸೇವೆಗಳನ್ನು ಅಧಿಸೂಚಿಸಲಾಯಿತು. ಇಂದು 91 ಇಲಾಖಾ ಸಂಸ್ಥೆಗಳ 1016 ಸೇವೆಗಳನ್ನು ಈ ಯೋಜನೆಯಡಿ ತರಲಾಗಿದ್ದು ಸುಮಾರು 20 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಿರುವುದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಸಕಾಲ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು. 2015ರಲ್ಲಿ ಪ್ರತಿ ತಿಂಗಳು ಸುಮಾರು 30 ಲಕ್ಷ ಅರ್ಜಿಗಳು ಸಕಾಲದಲ್ಲಿ ಸ್ವೀಕೃತಗೊಂಡಿದ್ದರೆ, 2019ರಲ್ಲಿ ಈ ಅರ್ಜಿಗಳ ಸಂಖ್ಯೆ 15 ಲಕ್ಷಕ್ಕೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅರ್ಜಿ ವಿಲೇವಾರಿ ಗತಿ ವಿಳಂಬಗೊಂಡಿದೆ. ಅವಧಿ ಮೀರಿ ವಿಲೇವಾರಿಯಾಗದ ಪ್ರಕರಣಗಳು, ವಿಳಂಬ ವಿಲೇವಾರಿಗಳ ಪ್ರಮಾಣ ಹೆಚ್ಚಾಗಿದೆ. ಅದೇ ರೀತಿ ನಾಗರಿಕರು ಸಲ್ಲಿಸಿದ ಅರ್ಜಿಗಳ ಸಕಾರಣವಿಲ್ಲದೆ ತಿರಸ್ಕೃತ ಪ್ರವೃತ್ತಿ ಹೆಚ್ಚಾಗಿರುವ ಬಗ್ಗೆ ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ಯೋಜನೆಯ ಕುರಿತಾದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಅಂತರ್‌ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದ ಇಂತಹ ಮಹತ್ವದ ಯೋಜನೆ ಸಮರ್ಪಕ ಅನುಷ್ಠಾನವಾಗುವಲ್ಲಿ ಎಡವುತ್ತಿರುವುದು ಸಹನೀಯವಲ್ಲವೆಂದು ಅಧಿಕಾರಿಗಳಿಗೆ ಅವರು ಮನವರಿಕೆ ಮಾಡಿಕೊಟ್ಟರು.

ಅಧಿಕಾರಿಗಳಿಗೆ ಸೂಚನೆಗಳು: ಸಕಾಲ ಸೇವೆಗಳ ಅಧಿನಿಯಮ ಪ್ರಕಾರ ಎಲ್ಲ 24 ಸಾವಿರ ಕಚೇರಿಗಳ ಮುಂದೆ ಆಯಾ ಕಚೇರಿಯಲ್ಲಿ ಲಭ್ಯವಾಗುವ ನಾಗರಿಕ ಸೇವೆಗಳು ಮತ್ತು ಇತರೆ ಸಂಬಂಧಿತ ಸೇವೆಗಳ ಮಾಹಿತಿಯುಳ್ಳ ಸೂಚನಾ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ನಾಗರಿಕರು ಸಲ್ಲಿಸುವ ಅರ್ಜಿಗಳನ್ನು ತಂತ್ರಾಂಶ ಆಧಾರಿತ ಸಕಾಲ ವ್ಯವಸ್ಥೆ ಮೀರಿ ಸ್ವೀಕರಿಸುವುದು ಹಾಗೂ ವಿಲೇವಾರಿ ಕಡ್ಡಾಯವಾಗಿ ಮಾಡಬಾರದು. ಅರ್ಜಿಗಳನ್ನು ನಿಗದಿತ ಸಮಯದಲ್ಲೇ ವಿಲೇವಾರಿ ಮಾಡಬೇಕು ಹಾಗೂ ಯಾವುದೇ ದುರುದ್ದೇಶ ಪೂರ್ವಕವಾಗಿ ತಿರಸ್ಕಾರ ಮಾಡಬಾರದು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೃಜನೆಗೊಂಡಿರುವ ಜಿಲ್ಲಾ ಸಕಾಲ ಸಮನ್ವಯ ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಆಯಾ ಜಿಲ್ಲೆಯಲ್ಲಿ ಸಕಾಲದ ಸಮರ್ಪಕವಾದ ಹಾಗೂ ಅನುಷ್ಠಾನದ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು ಹಾಗೂ ಆ ಸಭಾ ನಡವಳಿಗಳನ್ನು ಸಕಾಲ ಮಿಷನ್‌ಗೆ ಸಲ್ಲಿಸಬೇಕು.

ಸರಕಾರದ ಇ-ಆಫೀಸ್ ತಂತ್ರಾಂಶದೊಂದಿಗೆ ಸಕಾಲ ಯೋಜನೆಯನ್ನು ಸಮೀಕರಿಸಬೇಕು. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಪ್ರಾದೇಶಿಕ ಆಯುಕ್ತರು, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಟಿಸಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿ.ಪಂ. ಸಿಇಓ ಕಚೇರಿ ಹಾಗೂ ಇನ್ನಿತರ ಕಚೇರಿಗಳಲ್ಲಿ ಸಕಾಲದ ಸಮರ್ಪಕ ಅನುಷ್ಠಾನದ ಬಗ್ಗೆ ಮೇಲುಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು.

ಜನಸೇವಕ ಯೋಜನೆಯನ್ನು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಬೇಕು. ಎಲ್ಲ ನಾಗರಿಕ ಸೇವೆಗಳ ವಿಲೇವಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸೇವಾ ಸಿಂದು ಯೋಜನೆಯಡಿಯಲ್ಲಿ ಆನ್-ಲೈನ್‌ಗೊಳಿಸಲು (ಇ-ಸೈನ್ ಮತ್ತು ಡಿಜಿಲಾಕರ್ ವ್ಯವಸ್ಥೆಯೊಂದಿಗೆ) ಕ್ರಮವಹಿಸಲಾಗುವುದೆಂದು ಅವರು ಹೇಳಿದರು.

ವಿಡಿಯೋ ಸಂವಾದದಲ್ಲಿ ಅಪರ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ, ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ, ಅಪರ ಮಿಷನ್ ನಿರ್ದೇಶಕ ಪ್ರದೀಪ್, ವರಪ್ರಸಾದ್ ರೆಡ್ಡಿ ಹಾಗೂ ಆಡಳಿತಾಧಿಕಾರಿ ಕೆ.ಮಥಾಯಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News