ಡಿಕೆಶಿ ಬಂಧನ: ಬಿಎಸ್ವೈ, ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಸೆ.3: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ. ಘಟನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಡಿ.ಕೆ.ಶಿವಕುಮಾರ್ ಬಂಧನದಿಂದ ನಮಗೆ ಸಂತೋಷವಾಗಿಲ್ಲ. ಅವರು ಇದರಿಂದ ಮುಕ್ತರಾಗಿ ಹೊರಬಂದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷಪಡುತ್ತೇನೆ. ನಾನು ನನ್ನ ಜೀವನದಲ್ಲಿ ಯಾರಿಗೂ ಕೆಟ್ಟದಾಗಲಿ ಎಂದು ಬಯಸಿಲ್ಲ. ಕಾನೂನು ತನ್ನದೆ ಆದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
"ಡಿಕೆಶಿ ಅವರ ಬಂಧನ ಪಕ್ಕಾ ರಾಜಕೀಯ ಪ್ರೇರಿತವಾಗಿದ್ದು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಈಡಿ, ಸಿಬಿಐ ಅನ್ನು ದುರುಪಯೋಗಪಡಿಸಿಕೊಂಡಿವೆ. ಡಿಕೆಶಿ ಅವರನ್ನು ಬಂಧಿಸುವ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ" ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬದ ಆಚರಣೆಗೂ ಅವಕಾಶ ನೀಡದೆ 4 ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ ಡಿಕೆಶಿ ಅವರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್‌ನ ಇತರೆ ರಾಜಕೀಯ ಮುಖಂಡರನ್ನು ಬಂಧಿಸುವ ಮೂಲಕ ಬಿಜೆಪಿಯ ಬಣ್ಣ ಬಯಲಾಗಿದೆ. ಡಿಕೆಶಿ ಅವರು ಆರೋಪ ಮುಕ್ತರಾಗಿ ಹೊರಬರಲಿದ್ದಾರೆ. ಅವರ ಪರವಾಗಿ ನಾವು ನಿಲ್ಲುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇಂದ್ರ ಸರಕಾರ ಈಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಡಿಕೆಶಿ ರಾಜಕಾರಣಿ ಅಷ್ಟೇ ಅಲ್ಲ, ಒಬ್ಬ ಮಾಜಿ ಸಚಿವರು ಹೌದು. ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸುವ ಮೂಲಕ ದೌರ್ಜನ್ಯ ಎಸಗಲಾಗಿದೆ. ಒಬ್ಬ ವ್ಯಕ್ತಿಯ ಬಗ್ಗೆ ನ್ಯಾಯಾಲಯದಿಂದ ಆದೇಶ ಬರುವುದಕ್ಕಿಂತ ಮುನ್ನವೇ ಅವರನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಿರುವುದನ್ನು ಕೇಂದ್ರ ಸರಕಾರ ನಿಲ್ಲಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಡಿಕೆಶಿ ಅವರು ಆರೋಪ ಮುಕ್ತಗೊಂಡು ಶೀಘ್ರದಲ್ಲಿಯೇ ಹೊರಗಡೆ ಬರಲಿದ್ದಾರೆ. ಅವರ ಬಂಧನದ ಬಗ್ಗೆ ಈಗ ನಾವು ಏನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ.
-ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ