ಡಿ.ಕೆ.ಶಿವಕುಮಾರ್ ಬಂಧನ: ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್

Update: 2019-09-03 17:53 GMT

ಬೆಂಗಳೂರು, ಸೆ.3: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ದ್ವೇಷ ರಾಜಕಾರಣದಿಂದ ಬಂಧಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಕರೆ ನೀಡಲಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ತೋರಿ, ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲು ರಾಜ್ಯಾದ್ಯಂತ ಕರೆ ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶದ ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿ ಪಕ್ಷ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ. ಡಿಕೆಶಿ ಅವರು ಕಾನೂನು ಮೂಲಕವೇ ಹೋರಾಟ ನಡೆಸಿ ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ ಎಂದು ಹೇಳಿದರು.

ದೇಶದ ಆಡಳಿತ ಯಂತ್ರ ಕುಸಿದಿದೆ, ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದೆ, ನಿರುದ್ಯೋಗ ಹಿಂದೆಂದಿಗಿಂತಲೂ ಗರಿಷ್ಠ ಮಟ್ಟ ತಲುಪಿದೆ. ಇಂಥ ಸಂದರ್ಭದಲ್ಲಿ ಡಿಕೆಶಿ ಅವರನ್ನು ಬಂಧಿಸುವ ಮೂಲಕ ವಿರೋಧ ಪಕ್ಷಗಳನ್ನು ಬೆದರಿಸುವ ಕೀಳು ರಾಜಕಾರಣಕ್ಕೆ ಕೇಂದ್ರ ಸರಕಾರ ಇಳಿದಿರುವುದು ಖಂಡನೀಯ. ನಮ್ಮ ನಾಯಕ ಡಿಕೆಶಿ ಅವರ ಜೊತೆ ನಾವಿದ್ದೇವೆ.
-ಝಮೀರ್ ಅಹ್ಮದ್‌ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News