×
Ad

ಕಳಸ: ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ- ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ

Update: 2019-09-04 17:48 IST

ಕಳಸ, ಸೆ.4: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಟೈರ್ ಗೆ ಬೆಂಕಿ ಹೊತ್ತಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು. ಈ ವೇಳೆ ಸ್ಥಳಕ್ಕೆ ಬಂದ ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ಪ್ರತಿಭಟನಾ ನಿರತರೊಂದಿಗೆ ವಾಗ್ವಾದಕ್ಕೆ ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಕಾಲದಲ್ಲಿ ಮಧ್ಯಪ್ರವೇಶ ಮಾಡಿದ ಪೊಲೀಸರಿಂದಾಗಿ ಪರಿಸ್ಥಿತಿ ತಿಳಿಯಾಯಿತು.

ಜಿಲ್ಲಾ ಪಂಚಾಯತ್ ಸದಸ್ಯ ಕೆ.ಆರ್.ಪ್ರಭಾಕರ್, ತಾಪಂ ಸದಸ್ಯ ಹಿತ್ಲುಮಕ್ಕಿ ರಾಜೇಂದ್ರ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಲ್.ರಾಮದಾಸ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಕಳಸಶೇಶ್ವರ ದೇವಾಲಯದ ಮುಂಭಾಗದಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗತ್ತಾ ಪ್ರತಿಭಟನಾ ಮುಖ್ಯ ರಸ್ತೆಯಲ್ಲಿ ಸುರಿಯುತ್ತಿದ್ದ ಮಳೆ ಲೆಕ್ಕಿಸದೇ ಮೆರವರಣಿಗೆ ನಡೆಸಿದರು. ಮೆರವಣಿಗೆ ಮಹಾವೀರ ವೃತ್ತದ ಮೂಲಕ ಪೊಲೀಸ್ ಠಾಣೆಯ ಸರ್ಕಲ್‍ನಲ್ಲಿ ಜಮಾವಣೆಗೊಂಡಿದ್ದಲ್ಲದೇ ಕೆಲ ಹೊತ್ತು ರಸ್ತೆ ತಡೆ ಮಾಡಿದ್ದರು.

ಈ ವೇಳೆ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್, ಕೇಂದ್ರ ಸರಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆರ್ಥಿಕ ನೀತಿಗಳಿಂದಾಗಿ ಇಡೀ ದೇಶದ ಆರ್ಥಿಕ ವ್ಯವಸ್ಥೆ ಅದೋಗತಿಗೆ ತಲುಪಿಸಿದೆ. ಕೇಂದ್ರ ಸರಕಾರ ತನ್ನ ಹುಳುಕನ್ನು ಮುಚ್ಚಿಕೊಳ್ಳಲು ಜನರ ದಿಕ್ಕು ತಪ್ಪಿಸುತ್ತಿದ್ದು, ಸರಕಾರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಹುನ್ನಾರಗಳನ್ನು ವಿಫಲಗೊಳಿಸಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಬಳಸಿಕೊಂಡು ಹಣಿಯುವ ಕೆಲಸ ಮಾಡುತ್ತಿದೆ. ಡಿಕೆಶಿ ಬಳಿ ಪತ್ತೆಯಾದ ಹಣಕ್ಕೆ ಎಲ್ಲ ರೀತಿಯ ದಾಖಲೆ, ಸ್ಪಷ್ಟನೆ ಕೊಟ್ಟಿದ್ದರೂ ವಿನಾಕಾರಣ ಬಂಧಿಸಿರುವುದರ ಹಿಂದೆ ಬಿಜೆಪಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದ ಅವರು, ಕೂಡಲೇ ಡಿಕೆಶಿ ಅವರನ್ನು ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಾಡಿದ್ದ ರಸ್ತೆ ತಡೆ ತೆರವು ಮಾಡುವಂತೆ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಆಗಮಿಸಿ, ಕಾಂಗ್ರೆಸ್ ಮುಖಂಡರೊಂದಿಗೆ ವಾಗ್ವಾದಕ್ಕೆ ಮುಂದಾದರು. ಇದರಿಂದಾಗಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಈ ವೇಳೆ ಎರಡೂ ಪಕ್ಷದವರಿಗೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು ಎರಡೂ ಪಕ್ಷದ ಮುಖಂಡರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ರಸ್ತೆ ತಡೆಯಿಂದಾಗಿ ಕೆಲ ಹೊತ್ತು ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಬಳಿಕ ಕಾಂಗ್ರೆಸ್ ಮುಖಂಡರು ಕೆಲ ಹೊತ್ತು ಪ್ರತಿಭಟನೆ ನಡೆಸಿ ನಂತರ ಪ್ರತಿಭಟನೆ ಕೈಬಿಟ್ಟು ನಾಡಕಚೇರಿ ಉಪತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡರಾದ ರಿಝ್ವಾನ್, ಅಬ್ದುಲ್ ಶುಕುರ್, ವಿಶ್ವನಾಥ್, ತೋಟದೂರು ಶ್ರೀನಿವಾಸ್, ಹರ್ಷ, ವೀರೇಂದ್ರ ಮತ್ತಿತರರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News