ಡಿ.ಕೆ.ಶಿವಕುಮಾರ್ ಬಂಧನ ಸ್ವಾಗತಾರ್ಹ: ಎಸ್.ಆರ್.ಹಿರೇಮಠ್

Update: 2019-09-04 13:29 GMT

ಧಾರವಾಡ, ಸೆ.4: ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಈಡಿ(ಜಾರಿ ನಿರ್ದೇಶನಾಲಯ) ಶಾಸಕ ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಿರುವುದು ಸ್ವಾಗತಾರ್ಹವೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಡಿ(ಜಾರಿ ನಿರ್ದೇಶನಾಲಯ) ಬಂಧನದಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಸಿಬಿಐ ಕೂಡಾ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಿಂದಲೂ ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಲೇ ಇದ್ದೇವೆ. ಆದರೆ, ನಮ್ಮ ಜೀವಿತಾವಧಿಯಲ್ಲೇ, ಈಗ ಇವರ ಬಂಧನವನ್ನು ನೋಡುವಂತಾಗಿದೆ. ಇಂತಹದ್ದು ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಸಾಧ್ಯವೆಂದು ಅವರು ಹೇಳಿದರು.

ಉತ್ಕೃಷ್ಟ ಗುಣಮಟ್ಟದ 10.8 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ಮೈಸೂರು ಮಿನರಲ್ಸ್‌ಗೆ ನಷ್ಟ ಉಂಟು ಮಾಡಿದ್ದಾರೆ. 3 ಲಕ್ಷ ಕೋಟಿ ರೂ. ಮೊತ್ತದ ಗೃಹನಿರ್ಮಾಣ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರಿದೆ. ಡಿನೋಟಿಫಿಕೇಷನ್ ಹಗರಣದಲ್ಲಿ ಬೆನ್ನಿಗಾನಹಳ್ಳಿಯಲ್ಲಿ 4.20ಎಕರೆ ಜಾಗವನ್ನ ಶಿವಕುಮಾರ್‌ಗೆ ನೀಡುವಲ್ಲಿ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದೇ ಆದರೆ, ಬಿ.ಎಸ್.ಯಡಿಯೂರಪ್ಪ, ಗಾಲಿ ಜನಾರ್ದನ ರೆಡ್ಡಿ ಅವರಂತ ಸ್ವಪಕ್ಷದವರ ವಿರುದ್ಧವೂ ತನಿಖೆ ನಡೆಸಿ ಜೈಲಿಗೆ ಅಟ್ಟಲಿ ಎಂದು ಅವರು ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಮತ್ತು ಕುಟುಂಬದ ಇತರ ಸದಸ್ಯರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಕನಕಪುರದ ಅನೇಕ ಗುಡ್ಡಗಳನ್ನು ಕರಗಿಸಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಹಣ ಸಂಪಾದಿಸಿದ್ದಾರೆ. ಹಿಂದೆ ಗಾಲಿ ಜನಾರ್ದನ ರೆಡ್ಡಿ ವಿಚಾರಣೆ ಸಂದರ್ಭದಲ್ಲಿ ಮೂರು ವರ್ಷ ಜೈಲಿನಲ್ಲಿದ್ದಂತೆ, ಶಿವಕುಮಾರ್ ಕೂಡಾ ಜೈಲಿನಲ್ಲಿದ್ದು ತನಿಖೆ ಎದುರಿಸಬೇಕು. ರಾಜಕೀಯವಾಗಿ ಶಿವಕುಮಾರ್ ಸಾಕಷ್ಟು ಚಾಣಾಕ್ಷರಿದ್ದು ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ತನಿಖಾ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News