ಚಂದ್ರಯಾನ-2: ವಿಕ್ರಂ ಲ್ಯಾಂಡರ್ ಮತ್ತಷ್ಟು ಕೆಳಗಿಳಿಸುವ ಪ್ರಕ್ರಿಯೆ ಯಶಸ್ವಿ

Update: 2019-09-04 14:35 GMT

ಬೆಂಗಳೂರು, ಸೆ.4: ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ನೌಕೆಯನ್ನು ಎರಡನೆ ಬಾರಿ ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬುಧವಾರ ಮುಂಜಾನೆ ಯಶಸ್ವಿಯಾಗಿ ನಡೆಸಿದೆ.

ಮಂಗಳವಾರ ಬೆಳಗ್ಗೆ 8.50ರಲ್ಲಿ ನಾಲ್ಕು ಸೆಕೆಂಡ್‌ಗಳ ಕಾಲ ಮೊದಲನೆ ಬಾರಿ ಲ್ಯಾಂಡರ್ ಚಂದ್ರನತ್ತ ತಳ್ಳುವ ಮೂಲಕ ಯಶಸ್ವಿಯಾಗಿತ್ತು. ಇದೀಗ ಬುಧವಾರ ಮುಂಜಾನೆ 3.42 ಸಮಯದಲ್ಲಿ ಕಾರ್ಯಾಚರಣೆ 9 ಸೆಕೆಂಡ್‌ಗಳ ಕಾಲ ನಡೆದಿದ್ದು ನಿಗದಿತ ಕಕ್ಷೆಯಲ್ಲಿ ನೌಕೆಯನ್ನು ಇಳಿಸಲಾಗಿದೆ. ಪ್ರಸ್ತುತ ಲ್ಯಾಂಡರ್ 35kmx101km ಕಕ್ಷೆಯಲ್ಲಿದೆ. ಚಂದ್ರಯಾನ-2 ಆರ್ಬಿಟರ್ 96kmx125km) ಕಕ್ಷೆಯಲ್ಲಿ ತಿರುಗಲಿದ್ದು ಆರ್ಬಿಟರ್ ಮತ್ತು ಲ್ಯಾಂಡರ್ ಸರಿಯಾದ ಕಾರ್ಯಕ್ಷಮತೆ ಹೊಂದಿದೆ ಎಂದು ಇಸ್ರೊ ಹೇಳಿದೆ.

ಬುಧವಾರ ನಡೆಸಿರುವ ಕಾರ್ಯಾಚರಣೆ ಯಶಸ್ವಿಯಾಗಿರುವುದರಿಂದ ಸೆಪ್ಟೆಂಬರ್ 7ರಂದು ರಾತ್ರಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ಸೆಪ್ಟೆಂಬರ್ 7 ಶನಿವಾರ ಮಧ್ಯರಾತ್ರಿ 1 ಮತ್ತು 2 ಗಂಟೆಯ ನಡುವೆ ಇದು ಚಂದ್ರನಲ್ಲಿ ಇಳಿಯಲಿದೆ. ರಾತ್ರಿ 1.30 ಮತ್ತು 2.30ರ ಮಧ್ಯೆ ಚಂದ್ರಯಾನ ನೌಕೆ-2 ನೌಕೆ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.

ಚಂದ್ರಯಾನ-2ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಮೂರ್ನಾಲ್ಕು ಗಂಟೆಯೊಳಗೆ ಪ್ರಜ್ಞಾನ್ ರೋವರ್ ಅದರಿಂದ ಬೇರ್ಪಡಲಿದೆ. ಪ್ರಜ್ಞಾನ್ ರೋವರ್ ಚಂದ್ರನ ಮಣ್ಣಿನ ಬಗ್ಗೆ 14 ದಿನಗಳ ಕಾಲ ಸಂಶೋಧನೆ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.

ಜಟಿಲ ಕಾರ್ಯಾಚರಣೆ: ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ-2 ಲ್ಯಾಂಡರ್ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿವೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ಶಿವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News