ಡಿಕೆಶಿ ಸೂಕ್ತ ದಾಖಲೆ ನೀಡಿ ನಿರ್ದೋಷಿ ಆಗಬೇಕಿತ್ತು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2019-09-04 14:54 GMT

ಹಾಸನ, ಸೆ.4: ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ಡಿ.ಕೆ.ಶಿವಕುಮಾರ್ ಬಂಧನದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ ಕಾನೂನಿನಡಿ ಶಿಕ್ಷೆ ಆಗಲೇಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಅವರು ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡಿ ನಿರ್ದೋಷಿ ಆಗಬೇಕಾಗಿತ್ತು. ಯಾವುದೇ ದಾಖಲೆ ನೀಡದ ಕಾರಣ ಪೊಲೀಸರು ಬಂಧಿಸಿದ್ದಾರೆ ಎಂದ ಅವರು, ಬೀದಿಗೆ ಬಂದು ಕಲ್ಲು ಎಸೆಯುವುದು, ಬೆಂಕಿ ಹಾಕುವುದು ಯಾವ ಮಾರ್ಗ ಎಂದು ಪ್ರಶ್ನಿಸಿದರು.

ಶಿವಕುಮಾರ್ ವಿರುದ್ಧ ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ದಾಖಲು ಮಾಡಲಾಗಿದೆ, ಹೊರತು ಇದು ಹೊಸ ಪ್ರಕರಣವಲ್ಲ. ಇಲ್ಲಿವರೆಗೂ ಕೇಳಿದ ದಾಖಲೆ ಕೊಡದ ಕಾರಣ ಬಂಧಿಸಿದ್ದಾರೆ. ಯಾವ ಕಾರಣಕ್ಕೂ ಏಕಾಏಕಿ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಪಕ್ಷಕ್ಕೂ ಈ ವಿಚಾರದಲ್ಲಿ ಯಾವುದೇ ಸಂಬಂಧವಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ, ಶಾಸಕ ಪ್ರೀತಮ್ ಜೆ. ಗೌಡ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಎ. ಮಂಜು, ಹೆಚ್.ಎಂ. ವಿಶ್ವನಾಥ್, ಬಸವರಾಜು, ರೇಣುಕುಮಾರ್, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News