ಮಂಡ್ಯ: ಡಿಕೆಶಿ ಬಂಧನ ಖಂಡಿಸಿ ರಸ್ತೆ ತಡೆ, ಬಂದ್- ಬಿಜೆಪಿ ವಿರುದ್ಧ ಆಕ್ರೋಶ

Update: 2019-09-04 17:03 GMT

ಮಂಡ್ಯ, ಸೆ.4: ದಿಲ್ಲಿ ಪ್ಲ್ಯಾಟ್‍ನಲ್ಲಿ 8.59 ಕೋಟಿ ರೂ. ದೊರೆತ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಈ.ಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಕೇಂದ್ರದ ಬಿಜೆಪಿ ಸರಕಾರ ಮತ್ತು ಪ್ರಧಾನಿ ನರೇಂದ್ರಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಜೆಡಿಎಸ್ ಕಾರ್ಯಕರ್ತರೂ ಸಾಥ್ ನೀಡಿದರು.

ಜಿಲ್ಲಾ ಕಾಂಗ್ರೆಸ್‍ನ ವಿವಿಧ ಘಟಕಗಳ ಕಾರ್ಯಕರ್ತರು ಶಿವಕುಮಾರ್ ಬಂಧನ ಖಂಡಿಸಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದರು.

ಕೇಂದ್ರದ ಬಿಜೆಪಿ ಸರಕಾರ ಈ.ಡಿ ಹಾಗು ಸಿಬಿಐ ಅಧಿಕಾರಿಗಳ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬಂಧಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಕೂಡಲೇ ಬಿಜೆಪಿಯು ದ್ವೇಷದ ರಾಜಕಾರಣ ನಿಲ್ಲಿಸಬೇಕು. ಕಾಂಗ್ರೆಸ್ ನಾಯಕರನ್ನು ವಿನಾಕಾರಣ ಬಂಧಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಎಚ್.ಬಿ.ರಾಮು, ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್, ವಿಜಯಲಕ್ಷ್ಮಿ ರಘುನಂದನ್, ಸಿದ್ದರಾಮೇಗೌಡ, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಲಗೂರು ಬಂದ್: ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಮಳವಳ್ಳಿ ತಾಲೂಕಿನ ಹಲಗೂರು ಬಂದ್‍ಗೆ ಕರೆ ನೀಡಲಾಗಿತ್ತು. ದಳವಾಯಿ ಕೋಡಿಹಳ್ಳಿ ಬಳಿ ಹೆದ್ದಾರಿಗೆ ಟಯರ್ ಮತ್ತು ಮರದ ದಿಮ್ಮಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. 

ಈ ಸಂದರ್ಭ ಮಾರ್ಗಮಧ್ಯೆ ಸಂಚರಿಸುತ್ತಿದ್ದ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರ ಕಾರನ್ನು ಅಡ್ಡಗಟ್ಟಲಾಯಿತು. ಅನ್ನದಾನಿ ಕಾರಿನಿಂದ ಇಳಿದು ಪ್ರತಿಭಟನೆಯಲ್ಲಿ ತಾವೂ ಪಾಲ್ಗೊಂಡರು.

ಜೆಡಿಎಸ್ ಪ್ರತಿಭಟನೆ:

ಮದ್ದೂರು ತಾಲೂಕಿನ ಮಾದರಹಳ್ಳಿ ಗ್ರಾಮದಲ್ಲಿ ಮಂಡ್ಯ-ಕೆ.ಎಂ.ದೊಡ್ಡಿ ಮಾರ್ಗದ ರಸ್ತೆ ಮಧ್ಯೆ ಟಯರ್‍ಗೆ ಬೆಂಕಿಕೊಟ್ಟು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕೂಡಲೇ ಶಿವಕುಮಾರ್ ಬಿಡುಗಡೆಗೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News