ಡಿಸಿ ಕಚೇರಿಗೆ ಹಾನಿ ಮಾಡಿದ ಪ್ರಕರಣ: ಸಚಿವ ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2019-09-04 17:12 GMT

ಬೆಂಗಳೂರು, ಸೆ.4: ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲ ಎಂದು 2014ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಡಿಸಿ ಕಚೇರಿಗೆ ಹಾನಿ ಮಾಡಿದ ಆರೋಪ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ಇತರೆ ಆರೋಪಿಗಳ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿದೆ. 

ಮರಳು ಪರವಾನಿಗೆ ಕೊಡಿಸುವ ವಿವಾದ ಸಂಬಂಧ ನಡೆದಿದ್ದ ಗಲಾಟೆ ವೇಳೆ ದಾಖಲಾಗಿದ್ದ ಪ್ರಕರಣ ರದ್ದು ಮಾಡಬೇಕೆಂದು ಸಿಟಿ ರವಿ ಹಾಗೂ ಇನ್ನಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಸಿ.ಟಿ.ರವಿ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್ ಅವರು, 2014ರಲ್ಲಿ ಘಟನೆ ನಡೆದಾಗ 150 ಮಂದಿ ಪ್ರತಿಭಟನೆ ನಡೆಸಿ ಚಿಕ್ಕಮಗಳೂರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಆದರೆ, ಚಿಕ್ಕಮಗಳೂರು ಪೊಲೀಸರು 32 ಮಂದಿಯ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಅದರಲ್ಲೂ ಸಿ.ಟಿ.ರವಿ ಅವರನ್ನು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಿಗಣಿಸಿದ್ದಾರೆ. ಇದೊಂದು ರಾಜಕೀಯ ದುರುದ್ದೇಶದಿಂದ ದಾಖಲಾಗಿರುವ ಪ್ರಕರಣ ಎಂದು ಪೀಠಕ್ಕೆ ತಿಳಿಸಿದರು. ಪ್ರತಿವಾದ ಮಂಡಿಸುವ ವೇಳೆ ಸರಕಾರಿ ಪರ ವಕೀಲರು ಸರಿಯಾದ ರೀತಿ ಆಕ್ಷೇಪಣೆ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಮೇಲೆ ದಾಖಲಾಗಿದ್ದ ಪ್ರಕರಣವನ್ನ ರದ್ದುಗೊಳಿಸಿ ನ್ಯಾಯಪೀಠವು ಆದೇಶ ಹೊರಡಿಸಿತು.

ಪ್ರಕರಣವೇನು: 2014ರಲ್ಲಿ ಚಿಕ್ಕಮಗಳೂರು ಡಿಸಿ ಕಚೇರಿ ಎದುರು ಮರಳು ಪರವಾನಿಗೆ ಕೊಡಿ ಎಂದು ಸಿಟಿ ರವಿ ಹಾಗೂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ವೇಳೆ ಡಿಸಿ ಕಚೇರಿಗೆ ಹಾನಿಯಾದ ಕಾರಣ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಬಳಿಕ ನ್ಯಾಯಾಲಯ ಸಿ.ಟಿ ರವಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನ ಪ್ರಶ್ನಿಸಿ ಸಿಟಿ ರವಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News