ಕಾಡಾನೆ ಹಾವಳಿ: ಕಾಫಿ, ಅಡಿಕೆ ತೋಟ ನಾಶ- ಲಕ್ಷಾಂತರ ರೂ. ನಷ್ಟ

Update: 2019-09-04 18:01 GMT

ಚಿಕ್ಕಮಗಳೂರು, ಸೆ.4: ತಾಲೂಕಿನ ಜಾಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಆನೆ ಹಾವಳಿಯಿಂದ ನೂರಾರು ಎಕರೆ ಕಾಫಿ ಹಾಗೂ ಅಡಿಕೆ ತೋಟ ನೆಲ ಕಚ್ಚಿದೆ. ಆನೆ ಹಾವಳಿಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಆನೆ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಸಿದ್ದರಗಿರಿ ಕಾಫಿತೋಟದ ಮಾಲಕ ಒ.ಎಲ್.ಚಂದ್ರೇಗೌಡ ಹಾಗೂ ಪರಿಸರ ಪ್ರೇಮಿ ಡಾ.ಶಿವಪ್ರಸಾದ್ ಸರಕಾರವನ್ನು ಒತ್ತಾಯಿಸಿದ್ದಾರೆ. 

ಜಾಗರ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಉಕ್ಕಡ, ಭೂನಳ್ಳಿ, ಕೆಳಕುಂತಿ, ಮೇಲ್‍ಕುಂತಿ, ಕಾಳೇನಹಳ್ಳಿ ಹಾಗೂ ಕೊಳಗಾಮೆ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿದಿನ ರಾತ್ರಿ ಕಾಫಿ ಮತ್ತು ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಈ ಕಾಡಾನೆ ಹಾವಳಿಯನ್ನು ನಿಯಂತ್ರಿಸುವುದು ಅರಣ್ಯ ಇಲಾಖೆಗೆ ಮಾಡಿದ ಮನವಿಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಿಲ್ಲೆಯಲ್ಲಿ ಕಾಡಾನೆ ಹಾವಳಿಗಳನ್ನು ನಿಯಂತ್ರಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಜಾಗರ ಗ್ರಾಮದಲ್ಲಿ ತನಗೆ ಸೇರಿರುವ ಕಾಫಿ ಮತ್ತು ಅಡಿಕೆ ತೋಟಕ್ಕೆ ನುಗ್ಗಿರುವ ಆನೆಗಳ ದಂಡು ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ಸುಮಾರು ಒಂದು ಎಕರೆಗೂ ಹೆಚ್ಚು ಕಾಫಿ ಹಾಗೂ ಅಡಿಕೆ ತೋಟಗಳನ್ನು ಹಾನಿಮಾಡಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಇದೇ ಗ್ರಾಮದ ಕೆ.ಎನ್. ವೆಂಕಟೇಶ್ ಹಾಗೂ ಉಕ್ಕುಡ ಗ್ರಾಮದ ಬಸವರಾಜ್, ಕುಮಾರ್ ಅವರಿಗೆ ಸೇರಿದ ಕಾಫಿ ಮತ್ತು ಅಡಿಕೆ ತೋಟಗಳು ಆನೆ ದಾಳಿಯಿಂದ ನೆಲ ಕಚ್ಚಿದ್ದು, ಭುವನಹಳ್ಳಿಯ ಕಣ್ಣನ್, ಉಕ್ಕುಡದ ರಾಘವನ್ ಅವರ ತೋಟಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ಬೀಡುಬಿಟ್ಟು ಪ್ರಾಣಭೀತ ಉಂಟುಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿರುವ ಈ ಕಾಡಾನೆಗಳು ವಲಸೆ ಬಂದಿರುವ ಆನೆಗಳಾಗಿದ್ದು, ಯಾವುದೇ ಸಮಯದಲ್ಲಿ ಗ್ರಾಮಗಳಿಗೆ ನುಗ್ಗಿ ಪ್ರಾಣಹಾನಿ ಮಾಡುವ ಸಂಭವವಿದೆ. ಆನೆಗಳ ದಾಳಿಯಿಂದ ಪ್ರಾಣಾಪಾಯ ಸಂಭವಿಸುವ ಮುನ್ನ ಕಾಡಾನೆಗಳನ್ನು ಈ ಪ್ರದೇಶದಿಂದ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮುತ್ತೋಡಿ ಅಭಯಾರಣ್ಯದಲ್ಲಿ ಕಾಡಾನೆಗಳಿದ್ದರೂ ಈವರೆಗೂ ಇಂತಹ ಯಾವುದೇ ದಾಂಧಲೆ ನಡೆಸಿಲ್ಲ. ದಾಂಧಲೆ ನಡೆಸುತ್ತಿರುವ ಈ ಕಾಡಾನೆಗಳನ್ನು ನಿಯಂತ್ರಿಸದಿದ್ದಲ್ಲಿ ಯಾವುದೇ ಕ್ಷಣದಲ್ಲೂ ಪ್ರಾಣಹಾನಿ ಸಾಧ್ಯತೆ ಇದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಕಾಡಾನೆ ಹಾವಳಿಯಿಂದ ಜಾಗರ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 100 ರಿಂದ 200 ಎಕರೆ ಕಾಫಿ ಹಾಗೂ ಅಡಿಕೆ ತೋಟಗಳು ನೆಲಸಮಗೊಂಡಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಆನೆ ಬೀಡುಬಿಟ್ಟಿರುವ ಪ್ರದೇಶದ ಅಕ್ಕಪಕ್ಕದ ಗ್ರಾಮಗಳ ಜನರಿಗೆ ದೂರವಾಣಿ ಅಥವಾ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಿ ಆನೆ ದಾಳಿಯಿಂದ ಎಚ್ಚರಿಕೆ ವಹಿಸುವಂತೆ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News