ಮಠದಲ್ಲಿ ಮುಸ್ಲಿಂ ಲೇಖಕರ ಪುಸ್ತಕ ಬಿಡುಗಡೆ

Update: 2019-09-04 18:22 GMT

ವಿಜಯಪುರ, ಸೆ. 4: ಮಮದಾಪುರದ ವಿರಕ್ತಮಠದ ಶ್ರೀ ಅಭಿನವ ಮುರುಘ ರಾಜೇಂದ್ರ ಮಹಾಸ್ವಾಮಿಗಳು ತಮ್ಮ ಮಠದ ಕಾರ್ಯಕ್ರಮದಲ್ಲಿ ಮುಸ್ಲಿಂ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ.

ಶ್ರೀಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರ್ದು ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ವಯೋವೃದ್ಧ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ ಅವರ 'ಮರ್ಮಜ್ಞನ ವಚನಗಳು’ 2 ಮತ್ತು 3ನೇ ಸಂಪುಟಗಳನ್ನು ಅಭಿನವ ಮುರುಘರಾಜೇಂದ್ರ ಶ್ರೀಗಳು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಎಲ್ಲ ಜನರು ಜಾತಿ, ಧರ್ಮ, ಕೋಮು ವೈಷಮ್ಯಗಳನ್ನು ಮರೆತು ಭಾವೈಕ್ಯತೆಯಿಂದ ಕೂಡಿ ಬಾಳುವ ಮೂಲಕ 'ವಿವಿಧತೆಯಲ್ಲಿ ಏಕತೆ’ ಸಾರುವ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು, ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಗುಣದಾಳದ ಶ್ರೀ ವಿವೇಕಾನಂದ ದೇವರು, ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು ಅಲ್ಲಾಬಕ್ಷ ಮಿರ್ಜಿ ಅವರ ವಚನಗಳನ್ನು ವಿಶ್ಲೇಷಿಸಿದರು. ಸಾಹಿತಿ ಸಿದ್ಧರಾಮ ಬಿರಾದಾರ (ಮನಗೂಳಿ) ಮತ್ತು ನಿವೃತ್ತ ಪ್ರಾಚಾರ್ಯ ರಸೂಲ ಪೀರಸಾಬಗೋಳ ಪುಸ್ತಕಗಳ ಪರಿಚಯ ಮಾಡಿದರು.

ಶ್ರೀಮಂತ ಸಿದ್ದಣ್ಣ ದೇಸಾಯಿ (ಜೈನಾಪುರ), ಹಣಮಂತ ಹರನಟ್ಟಿ (ಕೊಡಬಾಗಿ), ಶಿವನಗೌಡ ಪಾಟೀಲ (ತಾಜಪುರ), ನಾಗಯ್ಯ ಹಿರೇಮಠ (ಮಂಗಳೂರು), ಅಪ್ಪಾಸಾಹೇಬ ಪಾಟೀಲ (ಶೇಗುಣಸಿ), ನೌಲಾಸಾಬ ಜಹಾಗಿರದಾರ, ಶೇಖಪ್ಪ ಪೂಜಾರಿ (ಉಪ್ಪಲದಿನ್ನಿ), ಡಾ. ಕೌಸರನಿಯಾಜ ಅತ್ತಾರ (ಮಮದಾಪುರ), ಮಹ್ಮದಯುನುಸ್ ಮಿರ್ಜಿ (ಹಂಚಿನಾಳ), ನ್ಯಾಯವಾದಿ ಅಸ್ಲಮ್ ಅತ್ತಾರ, ಪತ್ರಕರ್ತ ಅನಿಲ ಹೊಸಮನಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಚ್. ಗುರುರಾಜ ಕಾರ್ಯಕ್ರಮ ನಿರೂಪಿಸಿದರು.

ಮಮದಾಪುರ ಸುತ್ತಮುತ್ತಲ ಗ್ರಾಮಗಳ ನೂರಾರು ಹಿರಿಯರು, ಮಹಿಳೆಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News