ಜಾನ್ಸನ್‌ರ ಒಪ್ಪಂದ-ರಹಿತ ಬ್ರೆಕ್ಸಿಟ್‌ಗೆ ಬ್ರಿಟನ್ ಸಂಸತ್ತು ತಡೆ

Update: 2019-09-05 16:08 GMT

ಲಂಡನ್, ಸೆ. 5: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರ ಬ್ರೆಕ್ಸಿಟ್ ಯೋಜನೆಯನ್ನು ತಡೆಯುವ ಮಸೂದೆಯ ಪರವಾಗಿ ಸಂಸದರು ಬುಧವಾರ ಮತ ಹಾಕಿದ್ದಾರೆ ಹಾಗೂ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಅವಧಿಪೂರ್ವ ಚುನಾವಣೆ ನಡೆಸುವ ಅವರ ಕರೆಯನ್ನು ತಿರಸ್ಕರಿಸಿದ್ದಾರೆ. ಇದರೊಂದಿಗೆ ಬೊರಿಸ್ ಜಾನ್ಸನ್ ಸರಕಾರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಆರೇ ವಾರಗಳಲ್ಲಿ ಜಾನ್ಸನ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಒಪ್ಪಂದವಿಲ್ಲದೆ ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹಿಂದಕ್ಕೆ ಪಡೆಯುವುದರಿಂದ ಅವರನ್ನು ತಡೆಯುವುದಕ್ಕಾಗಿ ಅವರದೇ ಪಕ್ಷದ ಸಂಸದರು ವಿರೋಧ ಪಕ್ಷಗಳ ಜೊತೆ ಕೈಜೋಡಿಸಿದ್ದಾರೆ.

ಐರೋಪ್ಯ ಒಕ್ಕೂಟದೊಂದಿಗಿನ ನಿರ್ಗಮನ ಶರತ್ತುಗಳಿಗೆ ನಿಗದಿತ ಅವಧಿಯಲ್ಲಿ ಪ್ರಧಾನಿಗೆ ಒಪ್ಪಿಗೆ ನೀಡಲು ಸಾಧ್ಯವಾಗದಿದ್ದರೆ, ಬ್ರೆಕ್ಸಿಟನ್ನು ಜನವರಿಗೆ ಅಥವಾ ಅದಕ್ಕೂ ನಂತರದ ದಿನಾಂಕವೊಂದಕ್ಕೆ ಮುಂದೂಡಲು ಪ್ರಧಾನಿಯನ್ನು ಬಲವಂತಪಡಿಸುವ ಮಸೂದೆಯೊಂದನ್ನು ಸಂಸದರು ಬುಧವಾರ ಸಂಜೆ ಅಂಗೀಕರಿಸಿದರು.

ಅಕ್ಟೋಬರ್ 31ರಂದು ಒಪ್ಪಂದರಹಿತ ಬ್ರೆಕ್ಸಿಟನ್ನು ನಾನು ಬಯಸುವುದಿಲ್ಲ ಎಂದು ಜಾನ್ಸನ್ ಹೇಳುತ್ತಾರೆ. ಆದರೆ, ಒಪ್ಪಂದವೊಂದನ್ನು ಹೊಂದುವುದಕ್ಕಾಗಿ ಈ ಆಯ್ಕೆಯನ್ನು ನಾನು ಮುಕ್ತವಾಗಿರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, ಅಕ್ಟೋಬರ್ 15ರಂದು ಮಧ್ಯಂತರ ಚುನಾವಣೆ ನಡೆಸುವ ಪ್ರಧಾನಿ ಬೊರಿಸ್ ಜಾನ್ಸನ್‌ರ ಪ್ರಸ್ತಾಪಕ್ಕೆ ವಿರುದ್ಧವಾಗಿ ಪ್ರತಿಪಕ್ಷ ಲೇಬರ್ ಪಕ್ಷವು ಮತ ಹಾಕಿದೆ. ಚುನಾವಣೆ ನಡೆಯಬೇಕಾದರೆ ಅದಕ್ಕೆ ಮೂರನೇ ಎರಡರಷ್ಟು ಸಂಸದರ ಅನುಮೋದನೆ ಅಗತ್ಯವಾಗಿದೆ.

ಸಚಿವ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾನ್ಸನ್ ತಮ್ಮ

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರ ತಮ್ಮ ಹಾಗೂ ಅವರ ಸಂಪುಟದಲ್ಲಿ ಸಚಿವರಾಗಿರುವ ಜೋ ಜಾನ್ಸನ್ ಗುರುವಾರ ಸಚಿವ ಹುದ್ದೆಗೆ ಹಾಗೂ ಕನ್ಸರ್ವೇಟಿವ್ ಪಕ್ಷದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘‘ಕೌಟುಂಬಿಕ ನಿಷ್ಠೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ನಡುವೆ ನಾನು ಹರಿದು ಹಂಚಿ ಹೋಗಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ತನ್ನ ಅಣ್ಣನ ಬ್ರೆಕ್ಸಿಟ್ ನೀತಿಗೆ ಅವರು ವಿರುದ್ಧವಾಗಿದ್ದಾರೆ ಎಂದು ಹೇಳಲಾಗಿದೆ.

47 ವರ್ಷದ ಜೋ ಜಾನ್ಸನ್ ಕೂಡ ತನ್ನ ಅಣ್ಣನಂತೆ ಮಾಜಿ ಪತ್ರಕರ್ತರಾಗಿದ್ದಾರೆ. ಅವರು 2005 ಮತ್ತು 2008ರ ನಡುವೆ ‘ಫೈನಾನ್ಶಿಯಲ್ ಟೈಮ್ಸ್’ ಬ್ಯೂರೋ ಮುಖ್ಯಸ್ಥರಾಗಿ ಹೊಸದಿಲ್ಲಿಯಲ್ಲಿದ್ದರು.

ಅವರು ತನ್ನ ಅಣ್ಣನ ಸರಕಾರದಲ್ಲಿ ವಿಶ್ವವಿದ್ಯಾಲಯಗಳು, ವಿಜ್ಞಾನ ಸಂಶೋಧನೆ ಮತ್ತು ಹೊಸತನ ಖಾತೆಯ ಸಹಾಯಕ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News