ಭ್ರಷ್ಟರು ಬಿಜೆಪಿ ಸೇರ್ಪಡೆಗೊಂಡ ನಂತರ ಸ್ವಚ್ಛವಾಗುತ್ತಾರೆ: ದಿನೇಶ್ ಗುಂಡೂರಾವ್

Update: 2019-09-05 17:28 GMT

ತುಮಕೂರು, ಸೆ, 5: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆಂತರಿಕ ಬೇಗುದಿ ಹೆಚ್ಚಾಗಿದ್ದು, ಸರ್ಕಾರ ಮುಂದುವರೆಯುವ ಬಗ್ಗೆ ಅನಿಶ್ಚಿತತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಬಿಜೆಪಿ ಮುಖಂಡರು ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ, ಯಡಿಯೂರಪ್ಪ ಸಹ ಅಸಹಾಯಕರಾಗಿದ್ದು, ರಾಜ್ಯದಲ್ಲಿ ಕೇಂದ್ರಾಡಳಿತ ಸರ್ಕಾರವಿದೆ. ಬಿಜೆಪಿಯ ಒಳಗಿರುವ ಅಸಮಾಧಾನ ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ. ಭ್ರಷ್ಟಾಚಾರದ ತಳಹದಿಯ ಮೇಲೆ ಸ್ಥಾಪನೆಗೊಂಡಿರುವ ಸರ್ಕಾರ ಹೆಚ್ಚು ದಿನ ಉಳಿಯುವ ಬಗ್ಗೆ ಅನುಮಾನಗಳಿವೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ಮೇಲೆ ನಿಯಂತ್ರಣ ಹಾಕುವ ಮೂಲಕ ಕೇಂದ್ರದ ನಾಯಕರು ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ವೇದಿಕೆಯನ್ನು ಸಿದ್ಧ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ಚುನಾವಣೆ ಆಗುವ ಸಾಧ್ಯತೆ ಇದೆ. ಮಹಾರಾಷ್ಟ್ರ ಸೇರಿದಂತೆ ಇನ್ನುಳಿದ ರಾಜ್ಯಗಳೊಂದಿಗೆ ಕರ್ನಾಟಕದಲ್ಲಿಯೂ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದರು.

ರಾಜ್ಯದಲ್ಲಿರುವ ಬಿಜೆಪಿ ಕೇಂದ್ರಾಡಳಿತ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ನಷ್ಟಕ್ಕೆ ಪರಿಹಾರವನ್ನು ಕೇಳಲು ಆಗದಂತಹ ಪರಿಸ್ಥಿತಿಯಲ್ಲಿ ರಾಜ್ಯದ ಬಿಜೆಪಿ ನಾಯಕರಿದ್ದಾರೆ. ಪ್ರಧಾನಿ ಮೋದಿ ಸೆ.7ರಂದು ರಾಜ್ಯ ಬರಲಿದ್ದು. ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಮೋದಿ ಬರುತ್ತಿರುವುದು ಇಸ್ರೋ ಕೇಂದ್ರಕ್ಕೆ ಹೊರತು ಪ್ರವಾಹದ ಬಗ್ಗೆ ಚರ್ಚಿಸುವುದಕ್ಕಾಗಿ ಅಲ್ಲ ಎಂದರು.

ರಾಜ್ಯದಲ್ಲಿ ಉಂಟಾಗಿರುವ ನೆರೆ ಸಂತ್ರಸ್ಥರ ಪರಿಹಾರವನ್ನು ವಿತರಿಸುವುದಕ್ಕಾಗಿ ಸೆ.7ರಂದು ಕಾಂಗ್ರೆಸ್ ಪಕ್ಷದಿಂದಲೇ ಮೋದಿ ಅವರ ಭೇಟಿಗೆ ಕಾಲಾವಕಾಶವನ್ನು ಕೋರಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕಾಂಗ್ರೆಸ್ ಕೆಲ ಸಲಹೆಗಳನ್ನು ನೀಡಲಿದ್ದೇವೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯಲ್ಲಿ ಮನೆ ಹಾಗೂ ಭೂಮಿಯನ್ನು ಕಳೆದುಕೊಂಡಿರುವ ರೈತರ ನೆರವಿಗೆ ಸರ್ಕಾರ ನಿಲ್ಲಲು ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.

ವಿರೋಧ ಪಕ್ಷದ ಮುಖಂಡರೇ ಗುರಿ: ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷದ ಮುಖಂಡರನ್ನೇ ಗುರಿಯಾಗಿಸಿಕೊಂಡು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್,ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಮುಖಂಡರನ್ನು ಗುರಿಯಾಗಿಸಿಕೊಂಡು, ಐಟಿ, ಈಡಿ ಒತ್ತಡ ಹಾಕಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದರು.

ಬಿಜೆಪಿಯಲ್ಲಿ ಕ್ಷಮಾದಾನ ಯೋಜನೆ ಜಾರಿಯಲ್ಲಿದ್ದು, ಭ್ರಷ್ಟರು ಬಿಜೆಪಿ ಸೇರ್ಪಡೆಗೊಂಡ ನಂತರ ಸ್ವಚ್ಛವಾಗುತ್ತಾರೆ. ಅಂತಹ ಯೋಜನೆಯನ್ನು ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಜಾರಿಗೆ ತರಲಾಗಿದೆ. ಟಿಎಂಸಿ ಮುಕುಲ್ ರಾಯ್ ಸೇರಿದಂತೆ ಅನೇಕ ಮುಖಂಡರನ್ನು ಸಾಂವಿಧಾನಿಕ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆಯಲ್ಲಿಯೇ ಜೆಡಿಎಸ್ ಶಾಸಕರು ಪಕ್ಷಾಂತರಕ್ಕೆ ಹಣದ ಆಮಿಷವೊಡ್ಡಲಾಗುತ್ತದೆ ಎಂದು ಹೇಳಿದರು. ಬಿಜೆಪಿ ಮುಖಂಡರ ವಿರುದ್ಧ ತನಿಖೆ ನಡೆಸದ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಮುಖಂಡರನ್ನು ಮಾತ್ರ ಗುರಿಯಾಗಿಸಿಕೊಂಡಿರುವಂತಿದೆ, ಗುಜರಾತ್ ಶಾಸಕರನ್ನು ರಕ್ಷಿಸದೇ ಇದ್ದಿದ್ದರೆ ಡಿಕೆಶಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡರೇ ಹೇಳುತ್ತಾರೆ. ಡಿಕೆಶಿ ಅವರನ್ನು ಬಿಜೆಪಿ ಸೇರ್ಪಡೆಯಾಗುವಂತೆ ಸಾಕಷ್ಟು ಒತ್ತಡ ಹಾಕಲಾಗಿತ್ತು, ಅವರು ಒಪ್ಪದೇ ಇದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಶಫೀ ಅಹ್ಮದ್, ರಫೀ ಅಹ್ಮದ್, ಉಪ ಮೇಯರ್ ರೂಪಶ್ರೀ ಇದ್ದರು.

ಸೂಪರ್ ಸೀಡ್ ತಪ್ಪು ನಿರ್ಧಾರ
ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಸೂಪರ್‍ಸೀಡ್ ಮೈತ್ರಿ ಸರ್ಕಾರದ ಕೊನೆ ದಿನಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಎಂದು ಅಭಿಪ್ರಾಯಪಟ್ಟ ದಿನೇಶ್ ಗುಂಡೂರಾವ್, ಸೂಪರ್ ಸೀಡ್ ಒಳ್ಳೆಯ ತೀರ್ಮಾನವಾಗಿರಲಿಲ್ಲ. ಅದರಿಂದ ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಪ್ರಯತ್ನಿಸುವ ನಿಟ್ಟಿನಲ್ಲಿ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಶೀಘ್ರ ಮಾತುಕತೆ ನಡೆಸುತ್ತೇನೆ ಎಂದರು.

ಪಕ್ಷವೇ ಮುಖ್ಯ ಎನ್ನುವುದನ್ನು ಅರಿಯಲಿ
ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಒಳಬೇಗುದಿಯನ್ನು ಪರಿಹರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವುದು ಅವಶ್ಯಕವಾಗಿದ್ದು, ಎಲ್ಲರೂ ಒಟ್ಟಾಗಿ ಪಕ್ಷವನ್ನು ಸಂಘಟಿಸಬೇಕಾಗಿದೆ, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕಿದ್ದು, ಪಕ್ಷಕ್ಕಿಂತ ಬೇರೆ ಯಾವುದು ಮುಖ್ಯವಲ್ಲ ಎನ್ನುವುದನ್ನು ಮುಖಂಡರು ಅರಿತುಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News