ಪ್ರಜಾಪ್ರಭುತ್ವದ ಆತ್ಮ ಸತತ ದಾಳಿಗೊಳಗಾಗುತ್ತಿದೆ: ‘ಮ್ಯಾಗ್ಸೆಸೆ’ ಪ್ರಶಸ್ತಿ ಸ್ವೀಕರಿಸಿ ರವೀಶ್ ಕುಮಾರ್

Update: 2019-09-06 10:09 GMT

ಮನಿಲಾ, ಸೆ.6: “ಪ್ರಜಾಪ್ರಭುತ್ವದ ಆತ್ಮ ಪ್ರತಿ ದಿನ ಸತತ ದಾಳಿಗೊಳಗಾಗುತ್ತಿದೆ'' ಎಂದು ಪ್ರತಿಷ್ಠಿತ ‘ರೊಮೊನ್ ಮ್ಯಾಗ್ಸೆಸೆ’ ಪ್ರಶಸ್ತಿಯನ್ನು ಮನಿಲಾದಲ್ಲಿ  ಶುಕ್ರವಾರ  ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಎನ್‍ ಡಿಟಿವಿಯ ಆಡಳಿತ ಸಂಪಾದಕ ರವೀಶ್ ಕುಮಾರ್  ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

“ಪತ್ರಕರ್ತರಾಗಿ ಹಾಗೂ ಸಾಮಾನ್ಯ ನಾಗರಿಕರಾಗಿ ನಾವಿಂದು ಕಷ್ಟಕರ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ನಮ್ಮ ಪೌರತ್ವವೇ ಇಂದು  ವಿಚಾರಣೆಯಲ್ಲಿದೆ. ನಾವು ಮರು ಹೋರಾಟ ನಡೆಸಬೇಕಿದೆ'' ಎಂದು ಅವರು ಹೇಳಿದರು.

ಚಂದ್ರಯಾನ-2 ಕುರಿತಂತೆ ಮಾತನಾಡಿದ ಅವರು, “ಭಾರತ ಚಂದ್ರನನ್ನು ಜಯಿಸಿದೆ. ಆದರೆ ಈ ಹಮ್ಮೆಯ ಸಂದರ್ಭದಲ್ಲಿ  ನಾನು ಚಂದ್ರನನ್ನು ಹಾಗೂ ನನ್ನ ಕಾಲ ಕೆಳಗಿನ ಭೂಮಿಯನ್ನು ಏಕಕಾಲದಲ್ಲಿ ನೋಡುತ್ತೇನೆ. ನಮ್ಮ ರಸ್ತೆಗಳಲ್ಲಿನ ಹೊಂಡ ಗುಂಡಿಗಳು ಚಂದ್ರನಲ್ಲಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದೆ. ಜಗತ್ತಿನಾದ್ಯಂತ ಹಾಡುಹಗಲೇ ಬೆಂಕಿಯಲ್ಲಿರುವ ಪ್ರಜಾಪ್ರಭುತ್ವಗಳು ಚಂದಿರನ ತಂಪಿಗಾಗಿ ಹಾತೊರೆಯುತ್ತಿವೆ. ಆದರೆ ಈ ಬೆಂಕಿಯನ್ನು ಪರಿಶುದ್ಧ ಹಾಗೂ ಧೈರ್ಯದಿಂದ ನೀಡಲಾದ ಮಾಹಿತಿಯಿಂದ ಮಾತ್ರ  ನಂದಿಸಬಹುದು, ಕೇವಲ ವಾಕ್ಚಾತುರ್ಯದಿಂದಲ್ಲ'' ಎಂದು ಅವರು ಹೇಳಿದ್ದಾರೆ.

ಪತ್ರಿಕೋದ್ಯಮದ  ಮೌಲ್ಯಗಳ ಅಧಃಪತನದ ಕುರಿತಂತೆ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ರವೀಶ್, “ಸುದ್ದಿ ವಾಹಿನಿಗಳ ಸಂವಾದ ಕಾರ್ಯಕ್ರಮಗಳು ಆಡಳಿತ ಪಕ್ಷದ ಅಭಿಪ್ರಾಯಗಳನ್ನು ವೀಕ್ಷಕರ ಮನಸ್ಸಿನಲ್ಲಿ ತುಂಬಲು ಯತ್ನಿಸುತ್ತಿವೆ. ಈ ಸುದ್ದಿ ಲೋಕದಲ್ಲಿ ಈಗ ಕೇವಲ ಎರಡು ವಿಧದ ಜನರಿದ್ದಾರೆ - ದೇಶ ವಿರೋಧಿಗಳು ಹಾಗೂ ‘ನಾವು’. ಇದು ‘ನಾವು’ ಮತ್ತು ‘ಅವರು’ ಸಿದ್ಧಾಂತವಾಗಿದೆ. ದೇಶ ವಿರೋಧಿಗಳ ಸಮಸ್ಯೆಯೆಂದರೆ ಅವರು ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ಅಸಮ್ಮತಿ ವ್ಯಕ್ತಪಡಿಸುತ್ತಾರೆ. ಅಸಮ್ಮತಿ  ಪ್ರಜಾಪ್ರಭುತ್ವದ  ಆತ್ಮ, ಈ ಪ್ರಜಾಪ್ರಭುತ್ವದ ಆತ್ಮ ಪ್ರತಿ ದಿನ ದಾಳಿಗೊಳಗಾಗುತ್ತಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News