ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುವುದಕ್ಕೆ ಸೆಂಥಿಲ್ ರಾಜೀನಾಮೆಯೇ ಸಾಕ್ಷಿ: ಇಲ್ಯಾಸ್ ತುಂಬೆ

Update: 2019-09-06 17:08 GMT

ಬೆಂಗಳೂರು, ಸೆ.6: ಕೇಂದ್ರದಲ್ಲಿ ನರೇಂದ್ರ ಮೋದಿ ಎರಡನೇ ಬಾರಿ ಅಧಿಕಾರವನ್ನು ಪಡೆದ ನಂತರ ದೇಶದಲ್ಲಿರುವ ವಿರೋಧ ಪಕ್ಷಗಳನ್ನು ನಿಯಂತ್ರಿಸುವ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಕೆಲ ನಿರ್ದಿಷ್ಟ ಇಲಾಖೆಗಳನ್ನು ಹಾಗೂ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಿಯಂತ್ರಿಸಲು ಹೊರಟಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆಯೇ ಸಾಕ್ಷಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಬೇಕು. ನಿರಂಕುಶ ಪ್ರವೃತ್ತಿಯನ್ನು ವಿರೋಧಿಸಬೇಕು. ಇದಕ್ಕಾಗಿ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳು ಒಂದಾಗಬೇಕು. ಆದರೆ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ನಿಟ್ಟಿನಲ್ಲಿ ನಾವು ಒಂದಾಗದಿರುವುದು ಸಹ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಕೇಂದ್ರ ಸರಕಾರ ಲೋಕಸಭೆಯಲ್ಲಿ ಯಾವುದೇ ಮುಕ್ತ ಚರ್ಚೆಗೆ ಅವಕಾಶ ನೀಡದೆ ಹಲವಾರು ಮಸೂದೆಗಳನ್ನು ಏಕಪಕ್ಷೀಯವಾಗಿ ಜಾರಿ ಮಾಡುತ್ತಿರುವುದು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಎಂಬುವುದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಯನ್ನು ದೇಶದ ಸಂವಿಧಾನದ ಆಶಯ. ಈ ಆಶಯವನ್ನು ಈಡೇರಿಸಲು ಜನಾಂದೋಲನದ ಅನಿವಾರ್ಯತೆಯಿದೆ. ಈ ಜನಾಂದೋಲನದ ಆರಂಭವು ಕರ್ನಾಟಕದಿಂದಲೇ ಪ್ರಾರಂಭವಾಗಲಿ ಎಂದು ಇಲ್ಯಾಸ್ ತುಂಬೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News