×
Ad

ಸೆ.7 ರಿಂದ ಮೈಸೂರಿನಲ್ಲಿ ನೂತನ ಸಂಚಾರ ನಿಯಮ ಜಾರಿ: ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ

Update: 2019-09-06 23:27 IST

ಮೈಸೂರು,ಸೆ.6: ನೂತನ ಸಂಚಾರಿ ದಂಡ ಪಾವತಿ ಮೈಸೂರು ನಗರದಲ್ಲಿ ಸೆ.7 ರ ಶನಿವಾರದಿಂದ ಜಾರಿಗೆ ಬರಲಿದ್ದು, ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ಮೊದಲ ಬಾರಿಗೆ 2 ಸಾವಿರ ರೂ., ಎರಡನೇ ಬಾರಿಗೆ ಉಲ್ಲಂಘನೆಯಾದರೆ 4 ಸಾವಿರ ರೂ. ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ  ಮಾಹಿತಿ ನೀಡಿದರು.

ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ನಿಶ್ಶಬ್ದ ವಲಯದಲ್ಲಿ ವಾಹನ ಶಬ್ದ ಮಾಡಿದರೆ ಮೊದಲ ಬಾರಿಗೆ ಒಂದು ಸಾವಿರ ರೂ., ಎರಡನೇ ಬಾರಿಗೆ 2 ಸಾವಿರ ರೂ. ದಂಡ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ಒಂದು ಸಾವಿರ ರೂ. ದಂಡ, ಕಾರ್ ಸೀಟ್ ಬೆಲ್ಟ್ ಧರಿಸದೇ ಇದ್ದರೆ ಒಂದು ಸಾವಿರ ರೂ. ದಂಡ., ನೋಂದಣಿ ಮಾಡಿಸದ ವಾಹನಗಳನ್ನು ಚಾಲನೆ ಮಾಡಿದರೆ ಮೊದಲ ಬಾರಿಗೆ 5ಸಾವಿರ ರೂ, ಎರಡನೇ ಬಾರಿಗೆ ಉಲ್ಲಂಘನೆ ಮಾಡಿದರೆ ಹತ್ತು ಸಾವಿರ ರೂ. ದಂಡ ಅಥವಾ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ಮತ್ತು ವೇಗಗಳ ಪ್ರಯೋಗ ಮಾಡಿದರೆ, ಮೊದಲ ಬಾರಿಗೆ 5 ಸಾವಿರ ರೂ., 2ನೇ ಬಾರಿಗೆ ಹತ್ತು ಸಾವಿರ ರೂ. ದಂಡ ಅಥವಾ ಒಂದು ತಿಂಗಳ ಜೈಲುವಾಸ, ಅನಧಿಕೃತ ವ್ಯಕ್ತಿಗಳಿಗೆ ವಾಹನಗಳನ್ನು ಓಡಿಸಲು ಅವಕಾಶ ನೀಡುವುದು, ಅಥವಾ ಅಪ್ರಾಪ್ತರು ವಾಹನ ಚಲಾವಣೆ ಮಾಡಿದರೆ 5 ಸಾವಿರ ರೂ. ದಂಡ, ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ಹತ್ತು ಸಾವಿರ ರೂ.ದಂಡ ಅಥವಾ 6 ತಿಂಗಳು ಜೈಲುವಾಸ, ಮೂರು ವರ್ಷದೊಳಗೆ ಮತ್ತೆ ಉಲ್ಲಂಘನೆ ಮಾಡಿದರೆ 5 ಸಾವಿರ ರೂ.ದಂಡ ಅಥವಾ 2 ವರ್ಷ  ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಕಟ್ಟುನಿಟ್ಟಾಗಿ ವಿಧಿಸಲಾಗುವುದು. ನಗರದ ಜನತೆ ಸಂಚಾರಿ ನಿಯಮ ಪಾಲಿಸಿ ಎಂದು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಕವಿತಾ, ಎಸಿಪಿ ಮಹದೇವಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News